ಮಂಡ್ಯ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಲಂಚ ಕೇಳಿದ ಆರೋಪ ಹೊರಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಆರೋಪದ ಮೇಲೆ ಕೃಷಿ ಇಲಾಖೆ ಇಬ್ಬರು ಅಧಿಕಾರಿಗಳನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೆ.ಆರ್.ನಗರದ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಹಾಗೂ ಕೃಷಿ ಅಧಿಕಾರಿ ಸುದರ್ಶನ್ ವಶಕ್ಕೆ ಪಡೆಯಲಾಗಿರುವ ಅಧಿಕಾರಿಗಳು. ಕೃಷಿ ಸಚಿವರು ಒಬ್ಬೊಬ್ಬರಿಂದ 7-8 ಲಕ್ಷ ರೂ. ಲಂಚ ಕೇಳುತ್ತಿದ್ದಾರೆ. ಇಂತಹ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕುವ ಸಂಬಂಧ ಕ್ರಮ ವಹಿಸದಿದ್ದಲ್ಲಿ ಅಧಿಕಾರಿಗಳು ಕುಟುಂಬದ ಸದಸ್ಯರ ಜತೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯೊಂದಿಗೆ ಮಂಡ್ಯ ಜಿಲ್ಲೆಯ ಏಳು ಮಂದಿ ಸಹಾಯಕ ಕೃಷಿ ನಿರ್ದೇಶಕರು ಹೆಸರಿನಲ್ಲಿ ಕೆಲ ದಿನಗಳ ಹಿಂದೆ ರಾಜ್ಯಪಾಲರಿಗೆ ಪತ್ರ ಬರೆಯಲಾಗಿತ್ತು.
ಇದರ ಆಧಾರ ಮೇಲೆ ನಿಯಮಾನುಸರ ಕ್ರಮ ವಹಿಸುವಂತೆ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಜಿ. ಪ್ರದೀಪ್ ಅವರು ಆಗಸ್ಟ್ 1 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಪತ್ರ ಬರೆದಿದ್ದರು. ಈ ಸಂಬಂಧ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದ ಬೆನ್ನಲ್ಲೇ ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿ ಅವರು ಸಿಐಡಿ ಗೆ ಒಪ್ಪಿಸಿದ್ದರು. ಇದೀಗ ಮಂಡ್ಯ ಪೊಲೀಸರ ಸಹಕಾರದೊಂದಿಗೆ ಸಿಐಡಿ ಅಧಿಕಾರಿಗಳು ನಾನಾ ಕೋನಗಳಲ್ಲಿ ತನಿಖೆ ಆರಂಭಿಸಿದ್ದರು.
ಅಂತಿಮವಾಗಿ ತಮಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇರೆಗೆ ಮಂಡ್ಯ ಪೊಲೀಸರು ಇಬ್ಬರು ಅಧಿಕಾರಿಗಳನ್ನು ಶನಿವಾರ ರಾತ್ರಿ ದಸ್ತಗಿರಿ ಮಾಡಿ ಸಿಐಡಿ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಬಂಧಿತ ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಿಐಡಿ ಅಧಿಕಾರಿಗಳು ಭಾನುವಾರ ಕೋರ್ಟ್ ರಜೆ ಹಿನ್ನೆಲೆಯಲ್ಲಿ ಮಂಡ್ಯ ಜೆಎಂಎಫ್ ಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿ ವಿಚಾರಣೆಗಾಗಿ ವಾಪಸ್ ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ.