ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯಲ್ಲಿ ಎನ್ನುತ್ತಿದೆ ಕೊರೊನಾ.. ಕೋವಿಡ್ ಜಮಾನ ಮುಗೀತು ಅಂದುಕೊಳ್ಳುವಷ್ಟರಲ್ಲೇ ಇದೇ ವರ್ಷ ಜುಲೈನಲ್ಲಿ ಹೊಸ ಕೋವಿಡ್ ತಳಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ತಳಿ ಕೂಡಾ ವಿಶ್ವದ ಹಲವೆಡೆ ವರದಿಯಾಯ್ತು. ಇದೀಗ ಈ ಎರಡೂ ಕೋವಿಡ್ ತಳಿಗಳು ವಿಶ್ವದ ಹಲವು ರಾಷ್ಟçಗಳಲ್ಲಿ ಹಾವಳಿ ಇಡುತ್ತಿವೆ. ಈ ಮೂಲಕ ಕೋವಿಡ್ ಹೊಸ ಅಲೆಯ ಭೀತಿ ಸೃಷ್ಟಿಸಿವೆ. ಭಾರತದಲ್ಲೂ ಕೋವಿಡ್ನ ಸಂಭಾವ್ಯ ಹೊಸ ಅಲೆಯನ್ನು ಸಮರ್ಥವಾಗಿ ಎದುರಿಸಲು ವೈದ್ಯಕೀಯ ಲೋಕ ಸಜ್ಜಾಗುತ್ತಿದೆ. ಈ ತಳಿಗಳ ಪ್ರಭಾವ ಎಷ್ಟು? ಈ ಹಿಂದೆ ಆರೋಗ್ಯ ತುರ್ತು ಪರಿಸ್ಥಿತಿ ಸೃಷ್ಟಿಸಿದ್ದ ಕೋವಿಡ್ ತಳಿಗಿಂತಲೂ ಭಿನ್ನವೇ? ಈ ಕುರಿತ ಅವಲೋಕನ ಇಲ್ಲಿದೆ.
ಆತಂಕ ಸೃಷ್ಟಿಸಿವೆ 2 ಕೋವಿಡ್ ಹೊಸ ತಳಿಗಳು!
ಕೋವಿಡ್ನ 2 ತಳಿಗಳ ಬಗ್ಗೆ ಈಗ ವಿಶ್ವಾದ್ಯಂತ ಚರ್ಚೆ ಆಗುತ್ತಿದೆ. ಈ ತಳಿಗಳು ಹಲವು ಬಾರಿ ಅತಿ ವೇಗವಾಗಿ ರೂಪಾಂತರ ಹೊಂದುವ ಗುಣ ಹೊಂದಿವೆ ಅಂತಾ ತಜ್ಞರು ಹೇಳುತ್ತಿದ್ಧಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಎಲ್ಲ ದೇಶಗಳಿಗೂ ಎಚ್ಚರಿಕೆ ಸಂದೇಶ ರವಾನಿಸಿದೆ. ಈ ಹೊಸ ತಳಿಗಳ ಮೇಲೆ ನಿಗಾ ವಹಿಸುವಂತೆ ಹೇಳಿದೆ.
ಹೊಸ ತಳಿಗಳ ಪೈಕಿ ಮೊದಲ ತಳಿಯ ಹೆಸರು ಎರಿಸ್. ಇದನ್ನು ವೈದ್ಯಕೀಯವಾಗಿ ಎಜಿ.5 ಎಂದು ಗುರ್ತಿಸಲಾಗಿದೆ. ಮತ್ತೊಂದು ತಳಿಯ ವೈರಸ್ಗೆ ಬಿಎ 2.86 ಎಂದು ಹೆಸರಿಡಲಾಗಿದೆ.
ಈ ಎರಡೂ ಹೊಸ ತಳಿಗಳು ಬ್ರಿಟನ್, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಹಾವಳಿ ಇಡುತ್ತಿವೆ. ಸದ್ಯದ ಮಟ್ಟಿಗೆ ಈ ತಳಿಯಿಂದ ಸೋಂಕಿತರಾದ ರೋಗಿಗಳಿಗೆ ಸೌಮ್ಯ ಸ್ವರೂಪದ ರೋಗ ಲಕ್ಷಣಗಳು ಕಂಡು ಬರುತ್ತಿವೆ. ಅಂದರೆ ಓಮಿಕ್ರಾನ್ ಸೋಂಕಿತರಿಗೆ ಕಂಡು ಬರುತ್ತಿದ್ದ ರೋಗ ಲಕ್ಷಣಗಳೇ ಕಂಡು ಬರುತ್ತಿವೆ. ಆದರೆ, ಈ ಹೊಸ ತಳಿಗಳು ಸೋಂಕಿತರ ರೋಗ ನಿರೋಧಕ ಶಕ್ತಿಯನ್ನು ಅತಿ ವೇಗವಾಗಿ ಕುಗ್ಗಿಸುವ ಸಾಮರ್ಥ್ಯ ಹೊಂದಿವೆ. ಜೊತೆಯಲ್ಲೇ ಈ ತಳಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡಬಲ್ಲದು ಎಂದೂ ತಜ್ಞರು ಅಂದಾಜಿಸಿದ್ದಾರೆ.
ಹೊಸ ತಳಿಗಳು ಪದೇ ಪದೇ ಕಾಟ ಕೊಡೋದು ಏಕೆ?
ತಜ್ಞರ ಪ್ರಕಾರ ವೈರಸ್ಗಳು ಪದೇ ಪದೇ ರೂಪಾಂತರ ಹೊಂದುತ್ತಲೇ ಇರುತ್ತವೆ. ಅದರಲ್ಲೂ ಕೋವಿಡ್ ವೈರಸ್ 2019ರ ಡಿಸೆಂಬರ್ನಿAದ ಈವರೆಗೂ ಹಲವು ರೂಪಾಂತರಗಳನ್ನ ಕಂಡಿದೆ. ಎಲ್ಲರಿಗೂ ನೆನಪಿರುವಂತೆ ಮೊದಲು ಹರಡಿದ ಕೋವಿಡ್ ವೈರಾಣುವನ್ನು ಬೀಟಾ ಎಂದು ಗುರ್ತಿಸಲಾಗಿತ್ತು. ನಂತರ ಗಾಮಾ, ಡೆಲ್ಟಾ ಹಾಗೂ ಓಮಿಕ್ರಾನ್ ರೂಪಾಂತರಿ ವೈರಸ್ಗಳು ಆರ್ಭಟಿಸಿದವು. ಸಾಮಾನ್ಯವಾಗಿ ಈ ಎಲ್ಲಾ ರೂಪಾಂತರಿಗಳು ಒಬ್ಬರಿಂದ ಒಬ್ಬರಿಗೆ ಹರಡೋದ್ರಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಆದರೆ, ರೋಗ ಲಕ್ಷಣಗಳು ಮಾತ್ರ ಭಿನ್ನವಾಗಿ ಇರುತ್ತವೆ. ಕೋವಿಡ್ ಸೋಂಕಿತರ ರಕ್ತದ ಮಾದರಿಯನ್ನು ಸಂಗ್ರಹಿಸಿ ಅದನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ತಳಿ ಮಾರ್ಪಾಡು ಆಗಿರೋದು ಬೆಳಕಿಗೆ ಬರುತ್ತದೆ. ಈ ರೀತಿ ಬೆಳಕಿಗೆ ಬರುವ ಹೊಸ ತಳಿಗಳು ಒಂದು ವೇಳೆ ಅಪಾಯಕಾರಿ ಆಗಬಹುದು ಅನ್ನೋ ಸಾಧ್ಯತೆ ಇದ್ದಾಗ ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತಾಗಿ ಎಚ್ಚರಿಕೆ ನೀಡುತ್ತೆ.
ಎರಿಸ್ ರೂಪಾಂತರಿ ವೈರಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ವೇರಿಯಂಟ್ ಆಫ್ ಇಂಟರೆಸ್ಟ್ ಎಂದು ಗುರ್ತಿಸಿದೆ. ಇನ್ನು ಬಿಎ 2.86 ರೂಪಾಂತರಿಯನ್ನು ವೇರಿಯಂಟ್ ಅಂಡರ್ ಮಾನೀಟರಿಂಗ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಎರಡೂ ರೂಪಾಂತರಿಗಳ ಮೂಲಕ ಓಮಿಕ್ರಾನ್ ವೈರಾಣು ಅನ್ನೋದು ಮತ್ತೊಂದು ವಿಶೇಷ. ಹಾಗೆ ನೋಡಿದ್ರೆ ಸದ್ಯದ ಮಟ್ಟಿಗೆ ವಿಶ್ವಾದ್ಯಂತ ಎರಿಸ್ ರೂಪಾಂತರಿ ಹರಡುವಿಕೆ ಪ್ರಮಾಣ ಹೆಚ್ಚಾಗಿದೆ. ಇನ್ನು ಬಿಎ 2.86 ರೂಪಾಂತರಿಯು ಎರಿಸ್ನ ಬೆನ್ನ ಹಿಂದೆಯೇ ಹಿಂಬಾಲಿಸುತ್ತಿದೆ. ಇವೆರಡೂ ರೂಪಾಂತರಿಗಳು ಏನೆಲ್ಲಾ ಹಾವಳಿ ಇಡಬಹುದು ಅನ್ನೋದ್ರ ಮೇಲೆ ವೈದ್ಯ ಲೋಕ ನಿಗಾ ವಹಿಸಿದೆ.
ಹೊಸ ರೂಪಾಂತರಿಗಳ ರೋಗ ಲಕ್ಷಣಗಳೇನು? ಪರಿಹಾರ ಏನು?
ಇದೀಗ ತಜ್ಞರು ಗುರ್ತಿಸಿರುವ ಎರಡು ಹೊಸ ಕೋವಿಡ್ ರೂಪಾಂತರಿಗಳ ಬಗ್ಗೆ ಭಾರತದ ಖಾಸಗಿ ಮಾಧ್ಯಮ ಸಂಸ್ಥೆಯೊAದಕ್ಕೆ ಮದ್ರಾಸ್ನ ರೋಟರಿ ಕ್ಲಬ್ ಮುಂದಿನ ತಲೆಮಾರಿನ ಕೊರೊನಾ ವೈರಾಣು ತಜ್ಞರಾದ ಡಾ. ಪವಿತ್ರಾ ವೆಂಕಟಗೋಪಾಲನ್ ಅವರು ಸಮಗ್ರ ವಿವರಣೆ ನೀಡಿದ್ದಾರೆ. ಕೋವಿಡ್ ಜಾಗೃತಿ ತಜ್ಞರೂ ಅಗಿರುವ ಪವಿತ್ರಾ ಅವರು, ಹೊಸ ರೂಪಾಂತರಿಗಳು ಸೃಷ್ಟಿಸುವ ರೋಗ ಲಕ್ಷಣಗಳ ಕುರಿತಾಗಿ ಸಮಗ್ರ ಮಾಹಿತಿ ನೀಡಿದ್ದಾರೆ.
ಹಳೆಯ ರೂಪಾಂತರಿ ಕೊರೊನಾ ವೈರಾಣುವಿನ ಸೋಂಕಿಗೆ ತುತ್ತಾದವರಿಗೆ ಕಂಡು ಬರುತ್ತಿದ್ದ ರೋಗ ಲಕ್ಷಣಗಳಿಗಿಂತಲೂ ಹೆಚ್ಚಿನ ರೋಗ ಲಕ್ಷಣಗಳು ಈ ಹೊಸ ವೈರಾಣು ಸೋಂಕಿನಿAದ ಕಂಡು ಬರಲಿದೆ ಅಂತಾ ತಜ್ಞರು ಹೇಳಿದ್ದಾರೆ. ಸೋಂಕಿತರ ಮೈ ಮೇಲೆ ದದ್ದುಗಳ ಏಳಬಹುದು. ಕಣ್ಣುಗಳು ಕೆಂಪಾಗಬಹುದು, ಕೆಲವು ಪ್ರಕರಣಗಳಲ್ಲಿ ಅತಿಸಾರ ಉಂಟಾಗಬಹುದು. ಇದಲ್ಲದೆ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಸಾಮಾನ್ಯ ಲಕ್ಷಣಗಳಾಗಿವೆ. ಆಯಾಸ, ಸ್ನಾಯು ಸೆಳೆತ, ತಲೆ ನೋವು, ಗಂಟಲು ನೋವು ಕೂಡಾ ಕಂಡು ಬರಬಹುದು. ಇನ್ನು ಹಳೆಯ ರೂಪಾಂತರಿ ವೈರಾಣು ಸೋಂಕಿಗೆ ತುತ್ತಾದಾಗ ಕಂಡು ಬರುತ್ತಿದ್ದ ರೀತಿಯಲ್ಲೇ ರುಚಿ ಹಾಗೂ ವಾಸನೆಯ ಅರಿವು ಆಗೋದಿಲ್ಲ ಎಂದೂ ತಜ್ಞರು ಎಚ್ಚರಿಸಿದ್ದಾರೆ. ಸೋಂಕಿನಿAದ ರಕ್ಷಣೆ ಪಡೆಯಲು ಲಸಿಕೆ ಪಡೆಯೋದೇ ಸೂಕ್ತ ಮಾರ್ಗ ಎನ್ನುತ್ತಾರೆ ತಜ್ಞರು.
ಕೋವಿಡ್ ತುರ್ತು ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ ಮೋದಿ ಸರ್ಕಾರ!
ಕಳೆದ 7 ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ವಿಶ್ವಾದ್ಯಂತ ದಿಢೀರ್ ಏರಿಕೆ ಕಂಡಿದೆ. ಜಾಗತಿಕವಾಗಿ ಒಟ್ಟು 2.96 ಲಕ್ಷ ಹೊಸ ಕೇಸ್ಗಳು ದಾಖಲಾಗಿವೆ. ಹೀಗಾಗಿ, ಭಾರತ ಸರ್ಕಾರ ಕೂಡಾ ಸಂಭಾವ್ಯ ಕೋವಿಡ್ ಅಲೆ ಎದುರಿಸೋಕೆ ಸಿದ್ದತೆ ನಡೆಸಿದೆ. ತಜ್ಞರ ಜೊತೆ ಉನ್ನತ ಮಟ್ಟದ ಸಭೆ ನಡೆಸಿರುವ ಸರ್ಕಾರ, ಜಿನೋಮ್ ಸೀಕ್ವೆನ್ಸಿಂಗ್ ಹೆಚ್ಚಳ ಮಾಡುವಂತೆ ಸೂಚಿಸಿದೆ. ಹೊಸ ತಳಿಗಳ ಮೇಲೆ ನಿಗಾ ವಹಿಸಿ ಅಂತಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಸದ್ಯದ ಮಟ್ಟಿಗೆ ಭಾರತದಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದೆ. ಜೊತೆಗೆ ಕೋವಿಡ್ ಲಸಿಕಾ ಅಭಿಯಾನ ದೇಶದಲ್ಲಿ ಯಶಸ್ವಿಯಾಗಿ ನಡೆದಿರುವ ಕಾರಣ, ಜನರಲ್ಲಿ ರೋಗ ನಿರೋಧಕ ಶಕ್ತಿಯೂ ವೃದ್ದಿಯಾಗಿದೆ. ಲಸಿಕೆ ಪಡೆದವರ ಮರಣ ಪ್ರಮಾಣ ಅತಿ ಕಡಿಮೆ ಅನ್ನೋದು ಅಧ್ಯಯನಗಳಿಂದಲೂ ಸಾಬೀತಾಗಿದೆ. ಹೀಗಾಗಿ, ಜನರು ಭಯ ಪಡುವ ಅಗತ್ಯವೇ ಇಲ್ಲ ಅಂತಾ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಹೇಳಿದೆ. ಇನ್ನು ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಕೇವಲ 23 ಮಂದಿ ಹೊಸ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಸದ್ಯದ ಮಟ್ಟಿಗೆ ಹೇಳೋದಾದ್ರೆ ದೇಶದಲ್ಲಿ ಕೋವಿಡ್ನ ಪ್ರಭಾವ ಅತ್ಯಂತ ಕಡಿಮೆ ಇದೆ. ಆದರೆ, ಹೊಸ ರೂಪಾಂತರಿಗಳು ಭವಿಷ್ಯದಲ್ಲಿ ಹಾವಳಿ ಇಡಬಹುದೇ ಅನ್ನೋ ಆತಂಕವAತೂ ಇದ್ದೇ ಇದೆ.