ಮೈಸೂರು: ದಸರಾ ಸಾಂಸ್ಕೃತಿಕ ಸಮಿತಿ ವಿರುದ್ಧ ತಾರಾನಾಥ್ ಅವರ ಅಸಮಾಧಾನ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಅದಾದ ಬಳಿಕ ಇದೀಗ ಮತ್ತೋರ್ವ ನಿವೃತ್ತ ಅಧಿಕಾರಿಯೂ ಆಗಿರುವ ಕಲಾವಿದ ಕಾ.ರಾಮೇಶ್ವರಪ್ಪ ಅವರು ಅದೇ ಸಾಂಸ್ಕೃತಿಕ ಸಮಿತಿ ವಿರುದ್ಧ ಪತ್ರ ಬರೆದು ತಮ್ಮ ಬೇಸರ ಹೊರ ಹಾಕಿದ್ದಾರೆ.
ಮೈಸೂರಿನ ದಸರಾ ಕಾರ್ಯಕ್ರಮಗಳಲ್ಲಿ ಸಾಕಷ್ಟು ವರ್ಷ ಕೆಲಸ ಮಾಡಿರುವ ಕಾ.ರಾಮೇಶ್ವರಪ್ಪ ಸದ್ಯ ಮೈಸೂರಿನಲ್ಲಿ ಇನಿದನಿ ಮಣ್ಣಮಕ್ಕಳ ಹೊನ್ನಪದಗಳ ಬಳಗದ ಮೂಲಕ ಜನಪದವನ್ನು ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಅನುಮತಿಯನ್ನು ಪಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಮಿತಿ ಅರಮನೆ ವೇದಿಕೆಯಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತ ಮಾನವರೆಗೆ ಎಂಬ ಕಾರ್ಯಕ್ರಮಕ್ಕೆ ಅಂಚೆ ಮೂಲಕ ಆಹ್ವಾನಿಸಿ ಪತ್ರ ಕಳುಹಿಸಿದೆ. ಆದರೆ ಅ.4 ರಂದು ಸಿದ್ದಪಡಿಸಿರುವ ಪತ್ರ ಅವರಿಗೆ ಅ.17 ರಂದು ತಲುಪಿದೆ.
ಇದನ್ನು ದುರುದ್ದೇಶಪೂರ್ವಕವಾಗಿಯೇ ಕಳುಹಿಸಿದ್ದಾರೆಂದು ಅಸಮಾಧಾನ ಹೊರ ಹಾಕಿರುವ ಅವರು, ನನ್ನ ಅನುಮತಿಯಿಲ್ಲದೆ ಆಹ್ವಾನ ಪತ್ರಿಕೆ ಮುದ್ರಿಸಿರುವುದು ಸರಿಯಲ್ಲ. ಕಲಾವಿದರ ಅನುಮತಿಯಿಲ್ಲದೆ ಮುದ್ರಿಸುವ ಸಂಸ್ಕೃತಿ ಸರಿಯಲ್ಲ. ಅದರಲ್ಲೂ ನಾನು ಅರಮನೆ ಸಂಜೆ ವೇದಿಕೆ ನಿರೀಕ್ಷಿಸಿದ್ದು, ಆದರೆ ಹಗಲಿಂದ ಸಂಜೆವರೆಗೆ ಖಾಲಿ ಕುರ್ಚಿಗಳಿಗೆ ಅರ್ಥಹೀನ ಕಾರ್ಯಕ್ರಮ ನೀಡುವುದಿಲ್ಲ. ಹೀಗಾಗಿ ನನ್ನ ಹೆಸರನ್ನು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಿಂದ ತೆಗೆದು ಅದರ ನಕಲನ್ನು ನನಗೆ ಕಳುಹಿಸಿಕೊಡಿ.
ನಾನು ಸಹ ಸಾಕಷ್ಟು ದಸರೆ ಮಾಡಿದ್ದು, ಇಂತಹ ಅಸಬಂದ್ಧಗಳೆಲ್ಲವನ್ನೂ ಹೋಗಲಾಡಿಸಿದ್ದೇನೆಂದು 4 ಪುಟಗಳ ಪತ್ರ ಬರೆದಿದ್ದಾರೆ. ಮಾತ್ರವಲ್ಲದೆ, ನನ್ನ ಹಾಗೂ ನನ್ನ ತಂಡದ ವಿರುದ್ಧ ಮಾಡಿರುವ ಅಪಮಾನಕ್ಕೆ ಮಾನನಷ್ಟ ಮೊಕದ್ದಮೆ ದಾಖಲಿಸುವ ಎಚ್ಚರಿಕೆಯನ್ನು ಸಾಂಸ್ಕೃತಿಕ ಉಪಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಪತ್ರ ತಡವಾಗಿ ಬೆಳಕಿಗೆ ಬಂದಿದೆ.