ಕೊಳ್ಳೇಗಾಲ: ಮದುವೆಯಾದ ಐದೇ ದಿನಕ್ಕೆ ನಗರದ ಜಿ.ಪಿ.ಮಲ್ಲಪ್ಪಪುರಂ ನಿವಾಸಿ ಸತೀಶ್ ಬಾಬು (43) ಎಂಬುವವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಾವಿನ ಬಗ್ಗೆ ಅನುಮಾನವಿದೆ ಎಂದು ಹೇಳಿರುವ ಅವರ ಪತ್ನಿ, ಸತೀಶ್ ತಂದೆ, ತಾಯಿ ಮತ್ತು ಸಂಬಂಧಿಕರ ವಿರುದ್ಧ ನಗರ ಠಾಣೆಗೆ ದೂರು ನೀಡಿದ್ದಾರೆ.
ಸತೀಶ್ ಬಾಬು ಅವರು ಐದು ದಿನಗಳ ಹಿಂದೆ ಮೈಸೂರು ಜಿಲ್ಲೆ ತಿ.ನರಸಿಪುರ ತಾಲ್ಲೂಕಿನ ಕನ್ನಹಳ್ಳಿ ಗ್ರಾಮದ ಚೆನ್ನಾಜಮ್ಮ ಅವರನ್ನು ಮದುವೆಯಾಗಿದ್ದರು. ಇಬ್ಬರ ಮನೆಯವರು, ಸಂಬಂಧಿಕರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹ ನಡೆದಿತ್ತು.
ಮೂರು ದಿನಗಳ ಬಳಿಕ ತಮಗೆ ಅನಾರೋಗ್ಯ ಇರುವುದರಿಂದ ಯಾವುದೇ ಸಂಪ್ರದಾಯ, ಆಚರಣೆಗಳು ಬೇಡ ಎಂದು ಸತೀಶ್ ಬಾಬು ಹೇಳಿದ್ದರು. ಹಾಗಿದ್ದರೂ ಪ್ರತಿದಿನ ಎಂದಿನಂತೆ ಕೆಲಸ ಮಾಡುತ್ತಿದ್ದರು. ಕೃಷಿಕರಾಗಿದ್ದ ಅವರು ಭಾನುವಾರ ಬೆಳಿಗ್ಗೆ ಜಮೀನಿಗೆ ಹೋಗಿದ್ದರು. ಅಲ್ಲಿಂದ ಮನೆಗೆ ವಾಪಸ್ ಆದ ಬಳಿಕ ಕೊಠಡಿಗೆ ಹೋಗಿ ನೇಣು ಹಾಕಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
‘ಈ ಸಾವಿನ ಹಿಂದೆ ನನಗೆ ಅನುಮಾನಗಳಿವೆ. ನನ್ನ ಗಂಡನ ಸಾವಿಗೆ ಅವರ ತಂದೆ ಲಿಂಗರಾಜು, ತಾಯಿ ಮಹದೇವಿ, ಸಂಬಂಧಿಕರಾದ ದೇವಾನಂದ್, ಪ್ರಕಾಶ್, ವಿಜಯಕುಮಾರ್ ಕಾರಣ. ಹಾಗಾಗಿ, ಅವರ ಮೇಲೆ ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಿ ಕೊಡಬೇಕು’ ಎಂದು ಸತೀಶ್ ಬಾಬು ಪತ್ನಿ ಚೆನ್ನಾಜಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.