ಮೈಸೂರು: ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರ್ಕಾರಕ್ಕೆ ಮತದಾರರು ಬಹುಪರಾಕ್ ಹೇಳಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಸಚಿಚ ಸ್ಥಾನದ ಸಾಲಲ್ಲಿ ಎಚ್.ಸಿ.ಮಹದೇವಪ್ಪ ಸೇರಿ ಮತ್ತಿಬ್ಬರೂ ಸಹ ಸಚಿವ ಸ್ಥಾನದ ಆಕಾಂಕ್ಷಿಗಳ ಸ್ಥಾನದಲ್ಲಿ ಮುನ್ನಲೆಯಲ್ಲಿದ್ದಾರೆ.
ಹೌದು, ಹಿರಿತನದ ಆಧಾರದ ಮೇಲೆ ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬಹುತಕ ಖಚಿತ ಎನ್ನಲಾಗುತ್ತಿದೆ. ಆದರೆ, ಹಿರಿತನದ ಆಧಾರದ ಮೇಲೆ ನನಗೂ ಕೊಡಲಿ ಬಿಡಿ ಎಂದಿರುವ ಕೆ.ವೆಂಕಟೇಶ್ ಹಾಗೂ ನಾಯಕ ಸಮುದಾಯದ ಕೋಟಾದಡಿ ನನಗೂ ಆದ್ಯತೆ ಇರಲಿ ಎಂಬ ದಿಸೆಯಲ್ಲಿ ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದುಗೂ ಅವಕಾಶ ಸಿಗುವ ನಿರೀಕ್ಷೆಯಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದ ಮೇಲೆ ಪೈಪೋಟಿಯಲ್ಲಿರುವ ಹಿನ್ನೆಲೆಯಲ್ಲಿ ಅದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಹಂಚಿಕೆಯ ಪ್ರಕ್ರಿಯೆಯೂ ನಡೆಯಲಿದೆ.ಮುಂಬರುವ ಚಾಮರಾಜನಗರ ಹಾಗೂ ಮೈಸೂರು ಜಿಲ್ಲಾ ಲೋಕಸಭಾ ಚುನಾವಣೆಯ ಸಂಘಟನೆಯ ದೃಷ್ಠಿಯಿಂದ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಖಚಿತ ಎನ್ನಲಾಗುತ್ತಿದೆ. ಯಾಕೆಂದರೆ ಯುವ ನಾಯಕನಾದ ಸುನೀಲ್ ಬೋಸ್ ಆಕಾಂಕ್ಷಿಯಾಗಿದ್ದರೂ ಮಾಡಿರುವ ಕ್ಷೇತ್ರ ತ್ಯಾಗದಿಂದ ತಂದೆ ಸಚಿವರಾದರೆ ಬಳಿಕ ಸಂಪೂರ್ಣ ಹಿಡಿತ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ.
ಹಾಗೊಂದು ವೇಳೆ ತಂದೆಗೆ ಸಚಿವ ಸ್ಥಾನ ಸಿಕ್ಕರೆ ಜಿಲ್ಲೆ ಹಾಗೂ ಚಾಮರಾಜನಗರ ಭಾಗದಲ್ಲೂ ಪಕ್ಷ ಸಂಘಟನೆ ಮಾಡುವ ಮೂಲಕ ಜಿಲ್ಲೆಯ ಯುವ ನಾಯಕತ್ವವಹಿಸಿಕೊಳ್ಳುವುದರಲ್ಲಿ ಮುಂಚೂಣೆಯಲ್ಲಿದ್ದಾರೆ.
ಮತ್ತೊಂದೆಡೆ ಕೆ.ವೆಂಕಟೇಶ್ ನಾನು ಸಹ ಕಾಂಗ್ರೆಸ್ ಹಿರಿಯನಿರುವ ಹಿನ್ನೆಲೆಯಲ್ಲಿ ನನಗೂ ಸಚಿವ ಸ್ಥಾನದ ಅವಕಾಶ ಯಾಕೆ ಸಿಗಬಾರದು ಎಂದು ಮತ ಎಣಿಕೆ ಕೇಂದ್ರದಲ್ಲೇ ಕೇಳುವ ಮೂಲಕ ನಾನೂ ಸಚಿವ ಸ್ಥಾನ ಸ್ವೀಕರಿಸುವ ಹಿರಿತನ ಹೊಂದಿದ್ದೇನೆಂದು ಪರೋಕ್ಷವಾಗಿ ಘೋಷಿಸಿಕೊಂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವೂ ಹಂಚಿಕೆ ಆಗುವುದು ನಿಶ್ಚಿತವಾಗಿದೆ. ಇದರಲ್ಲಿ ಎಚ್.ಸಿ.ಮಹದೇವಪ್ಪ ಹೆಸರು ಮುನ್ನಲೆಯಲ್ಲಿದೆ.
ಇನ್ನೂ ಹಳೆ ಮೈಸೂರು ಭಾಗದ ನಾಯಕ ಸಮುದಾಯಕ್ಕೆ ಆದ್ಯತೆ ನೀಡಲು ಅನಿಲ್ ಚಿಕ್ಕಮಾದುಗೂ ಸಚಿವ ಸ್ಥಾನ ನೀಡುವ ಚಿಂತನೆ ಹೈಕಮಾಂಡ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಎನೇ ಮಾಡಿದರೂ ಈಗ ಹೈಕಮಾಂಡ್ ಮುಂಬರುವ ಲೋಕಸಭಾ ಚುನಾವಣೆ ಮುಂದಿಟ್ಟುಕೊಂಡು ಅಂತಿಮ ತೀರ್ಮಾನ ಕೈಗೊಳ್ಳುವುದು ನಿಶ್ಚಿತವಾಗಿದೆ.
ತನ್ವೀರ್ ಗೆ ಅನುಮಾನ
ಇನ್ನೂ ಈ ನಡುವೆ ಸ್ಪರ್ಧೆಯಿಂದಲೇ ಹಿಂದೆ ಸರಿದಿದ್ದ ತನ್ವೀರ್ ಸೇಠ್ ಶಾಸಕರಾಗಿದ್ದಾರೆ. ಈಗಾಗಲೇ ಒಮ್ಮೆ ಸಚಿವರಾಗಿಯೂ ಸ್ಥಾನ ಪಡೆದಿದ್ದು, ಆರೋಗ್ಯ ಕಾರಣ ನೀಡಿರುವುದರಿಂದ ಇವರ ಬದಲಿಗೆ ಮುಸ್ಲಿಂ ಸಮುದಾಯದ ಜಮೀರ್ ಅಹಮ್ಮದ್, ಯು.ಟಿ.ಖಾದರ್ ಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಖಚಿತ ಎನ್ನಲಾಗಿದೆ. ಹೀಗಾಗಿ ತನ್ವೀರ್ ಸೇಠ್ ಗೆ ಸಚಿವ ಸ್ಥಾನದ ನಿರೀಕ್ಷೆಯಿಂದಲೂ ಹಿಂದೆ ಸರಿದಿದ್ದಾರೆನ್ನಲಾಗಿದೆ.