ಚಾಮರಾಜನಗರ: ಇತ್ತೀಚಿಗೆ ರಾಜ್ಯದ ಪ್ರವಾಸಿ ಹಾಗೂ ಐತಿಹಾಸಿಕ ಸ್ಥಳದಲ್ಲಿ ಕೆಲವು ಪ್ರವಾಸಿಗರ ಹುಚ್ಚಾಟ ಮಿತಿ ಮೀರುತ್ತಿದ್ದು, ಉಳಿದ ಪ್ರವಾಸಿರಿಗೆ ಹಾಗೂ ಭಕ್ತರಿಗೆ ಅತೀವ ತೊಂದರೆ ಉಂಟಾಗುತ್ತಿದೆ. ಇದೀಗ ಇಂತಹ ಘಟನೆ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
ಸುಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ಮದ್ಯವ್ಯಸನಿಗಳ ಹುಚ್ಚಾಟ ಹೆಚ್ಚಾಗಿದ್ದು, ದೇವರ ದರ್ಶನಕ್ಕೆ ಎಂದು ಬಂದು ಪುಂಡಾಟ ಮೆರೆದಿದ್ದಾರೆ. ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಹದೇಶ್ವರ ದೇವಾಲಯ ಪ್ರಾಧಿಕಾರಕ್ಕೆ ಸೇರಿರುವ ನಾಗಮಲೆ ಭವನದಲ್ಲಿ ನಿನ್ನೆ ರಾತ್ರಿ ಕೆಲ ಯುವಕರು ಮದ್ಯಪಾನ ಮಾಡಿ ಪುಂಡಾಟ ಮೆರೆದಿದ್ದಾರೆ.
ಗುಂಡ್ಲುಪೇಟೆ ಮೂಲದ ಮಹೇಂದ್ರ, ಸಿದ್ದಪ್ಪ, ಮಾದಪ್ಪ ಹಾಗೂ ಆನಂದ್ ಎನ್ನುವ ಯುವಕರು ಮದ್ಯಪಾನ ಮಾಡಿ ನಾಗಮಲೆ ಭವನದ ಸಿಬ್ಬಂದಿ ಜೊತೆ ಗಲಾಟೆ ನಡೆಸಿದ್ದಾರೆ. ದೇವರ ದರ್ಶನಕ್ಕೆ ಬಂದಿದ್ದ ಯುವರು ನಾಗಮಲೆ ಭವನದಲ್ಲಿ ತಂಗಿದ್ದರು. ಬಳಿಕ ತಡರಾತ್ರಿ ಕುಡಿದ ಮತ್ತಿನಲ್ಲಿ ಯುವಕರು ಗಲಾಟೆ ನಡೆಸಿದ್ದಾರೆ. ಪಕ್ಕದ ರೂಮ್ನಲ್ಲಿ ವಾಸ್ತವ್ಯ ಹೂಡಿದ್ದ ಮಹಿಳೆ ಈ ಬಗ್ಗೆ ದೂರು ನೀಡಿದ್ದು, ಯುವಕರ ವರ್ತನೆಯನ್ನು ಪ್ರಶ್ನಿಸಿದ ಪ್ರಾಧಿಕಾರದ ಸಿಬ್ಬಂದಿ ಜೊತೆ ಸಹ ಗಲಾಟೆ ನಡೆಸಿದ್ದಾರೆ.