ಭೋಪಾಲ್: 23 ವರ್ಷದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಯುವತಿಯನ್ನು ಅರ್ಚನಾ ಅಲೇರಿಯಾ ಎಂದು ಗುರುತಿಸಲಾಗಿದೆ. ಈಕೆ ಇಂದೋರ್ ನಗರದ ಬಿಜ್ಪುರ್ ಪ್ರದೇಶದ ನಿವಾಸಿ.
ಮಾವು ತಿಂದ ಬಳಿ ಅರ್ಚನಾ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಜುಲೈ 8ರಂದು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸೋಮವಾರ ರಾತ್ರಿ ಚಿಕಿತ್ಸೆ ಫಲಿಸದೇ ಅರ್ಚನಾ ಇಹಲೋಕ ತ್ಯಜಿಸಿದ್ದಾಳೆ. ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ಅರ್ಚನಾ ಮಾವ ಬನ್ಸಿಲಾಲ್ ಅಲೇರಿಯಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮಧ್ಯಾಹ್ನ ಊಟವಾದ ಬಳಿಕ ಅರ್ಚನಾ ಮಾವು ತಿಂದಿದ್ದಾಳೆ. ಇದಾದ ಬಳಿಕ ಆಕೆಯ ಆರೋಗ್ಯದಲ್ಲಿ ವ್ಯತ್ಯಾಸವುಂಟಾಗಿದೆ. ಕೂಡಲೇ ನಾವು ಆಕೆಯನ್ನು ಸ್ಥಳೀಯ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದೆವು. ಆದರೆ ಅಲ್ಲಿ ಪರೀಕ್ಷೆ ಮಾಡಿದ ವೈದ್ಯರು ಕೆಲವೊಂದಷ್ಟು ಮಾತ್ರೆಗಳನ್ನು ಬರೆದುಕೊಟ್ಟರು.
ಅಂತೆಯೇ ಮಾತ್ರೆಗಳನ್ನು ತೆಗೆದುಕೊಂಡು ಮನೆಗೆ ವಾಪಸ್ ಬಂದೆವು. ಆದರೆ ಆಕೆಗೆ ಮತ್ತೆ ತಲೆತಿರುಗುವಿಕೆ ಆರಂಭವಾಯಿತು. ಬಳಿಕ ಆಸ್ಪತ್ರೆಗೆ ದಾಖಲಿಸಿದೆವು. ಆದರೆ ಚಿಕಿತ್ಸೆ ಫಲಿಸದೇ ಆಕೆ ಸೋಮವಾರ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.
ಆಕೆ ವಿಷಕಾರಿ ಮಾವು ತಿಂದ ಪರಿಣಾಮವೇ ಮೃತಪಟ್ಟಿರುವುದಾಗಿ ಅರ್ಚನಾ ಕುಟುಂಬಸ್ಥರು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಮರೋತ್ತರ ಪರೀಕ್ಷೆಯ ಬಳಿಕವಷ್ಟೇ ಅರ್ಚನಾ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಈ ಮಧ್ಯೆ ಅರ್ಚನಾ ಕುಟುಂಬಸ್ಥರ ಹೇಳಿಕೆಗಳನ್ನು ಕೂಡ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ರಾಜೇಂದ್ರ ನಗರ ಪೊಲೀಸ್ ಠಾಣೆಯ ಎಎಸ್ಐ ರಾಜೇಂದ್ರ ಸಿಂಗ್ ಚೌಹಾಣ್ ಹೇಳಿದ್ದಾರೆ.