ಅದ್ಧೂರಿ ದಸರೆಗೆ ಚಿಂತನೆ, ಆಯ್ಕೆ ಪ್ರಕ್ರಿಯೆ ಮತ್ತಷ್ಟು ಬಿಗಿ
ಮೈಸೂರು: ಈ ತಿಂಗಳ ಮಾಸಂತ್ಯಕ್ಕೆ ದಸರಾ ಗಜಪಡೆಯ ಪಟ್ಟಿಯನ್ನು ಸಮುತಿಯ ಮುಂದಿಡಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದ್ದು, ಈ ಬಾರಿ ವಿಶೇಷವಾಗಿ ಕಳೆದ ಮೂರು ವರ್ಷಗಳಲ್ಲಿ ನಡೆದ ಅವಘಡ ಮರುಕಳಿಸದಂತೆ ಎಚ್ಚರಿಕೆಯ ಹೆಜ್ಜೆಯನ್ನಿಡಲು ವಿಭಿನ್ನವಾಗಿ ಆಯ್ಕೆ ಪ್ರಕ್ರಿಯೆ ನಡೆಸಲಿವೆ.
ಭವ್ಯ ಇತಿಹಾಸ ಹೊಂದಿರುವ ಮೈಸೂರು ದಸರಾ ಮಹೋತ್ಸವಕ್ಕೆ ಜಂಬೂ ಸವಾರಿಯೇ ಪ್ರಮುಖ ವಿಶೇಷ ಆಕರ್ಷಣೆ. ಅದರಂತೆ ಮುಖ್ಯಮಂತ್ರಿಗಳ ಜಿಲ್ಲೆಯಾಗಿರುವುದರಿಂದ ಈ ಬಾರಿ ಎಂದಿನಂತೆ ಅದ್ಧೂರಿಯಾಗಿ ದಸರೆ ಆಚರಿಸುವುದು ಖಚಿತವಾಗಿದೆ.
ನಾಗರ ಹೊಳೆಯ ತಿತಿಮತಿ ಹಾಗೂ ಸುತ್ತಮುತ್ತಲಿನ ಆನೆ ಶಿಬಿರ, ಕೊಡಗು ಜಿಲ್ಲೆಯ ದಾರ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಾಪುರ ಆನೆ ಶಿಬಿರ ಸೇರಿದಂತೆ ಈ ಎಲ್ಲಾ ಕ್ಯಾಂಪ್ಗಳಲ್ಲಿ ೧೧೫ಕ್ಕೂ ಹೆಚ್ಚು ಆನೆಗಳಿವೆ. ಇದರಲ್ಲಿ ದಸರೆಗೆ ೨೦ ಆನೆಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಇವುಗಳಲ್ಲಿ ೧೫ ಆನೆಯನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. 9 ಆನೆಗಳು ಈ ಹಿಂದೆ ದಸರೆಯಲ್ಲಿ ಪಾಲ್ಗೊಂಡ ಅನುಭವಿಗಳಿರುತ್ತವೆ. ಇನ್ನುಳಿದ ಆನೆಗಳನ್ನು ಹೊಸದಾಗಿಯೇ ಆಯ್ಕೆ ಮಾಡಿಕೊಳ್ಳುವ ಮೂಲಕ ಹೊಸ ಆನೆಗಳ ತಯಾರಿ ನಡೆಸಿದ್ದಾರೆ.
ಹೊಸಬರಿಗೆ ತಾಲೀಮು: ಜಂಬೂ ಸವಾರಿಯಲ್ಲಿ ೭೫೦ ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಆನೆ ವಯಸ್ಸು ೬೦ ವರ್ಷ ಮೀರುವಂತಿಲ್ಲ. ಅಂತೆಯೇ ೬೦ವರ್ಷ ಪೂರೈಸಿದ ಅರ್ಜುನನ ನಂತರ ಇದೀಗ ಅಭಿಮನ್ಯು ಅಂಬಾರಿ ಹೊರುವ ಕಾರ್ಯ ನಿರ್ವಹಿಸುತ್ತಿದೆ. ಅಭಿಮನ್ಯುವಿಗೂ ೫೮ ವರ್ಷ ತುಂಬುತ್ತಿದ್ದು, ಮುಂದಿನ ಎರಡು ವರ್ಷವಷ್ಟೇ ಅಭಿಮನ್ಯು ಅಂಬಾರಿ ಹೊರುವ ಅವಕಾಶ ಪಡೆಯಲಿದ್ದಾನೆ. ನಂತರ ಮತ್ತೊಂದು ಆನೆ ಈ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ.
ಮಾತ್ರವಲ್ಲದೆ, ಇದಲ್ಲದೇ ನಿಶಾನೆ ಆನೆ ಸೇರಿದಂತೆ ಇನ್ನಿತರ ಜವಾಬ್ದಾರಿ ನಿರ್ವಹಣೆ ಮಾಡಲು ಜನರ ನಡುವೆ ಘಾಸಿಗೊಳ್ಳದೇ ಪಟಾಕಿ, ಸಿಡಿಮದ್ದಿಗೆ ಅಂಜದೇ ಸಾಗುವ ೨ನೇ ಹಂತದ ಆನೆಗಳನ್ನು ಸಿದ್ಧಪಡಿಸಬೇಕಿದೆ. ಹೊಸಬರಿಗೆ ತಯಾರಿ ನೀಡುವ ಉದ್ದೇಶದಿಂದಲೇ ಈ ಬಾರಿ ದಸರೆಗೆ ೨ ತಿಂಗಳು ಬಾಕಿ ಇರುವಂತೆಯೇ ಆನೆಗಳನ್ನು ಅರಮನೆ ಆವರಣದ ಶಿಬಿರಕ್ಕೆ ಕರೆತರಲಾಗುತ್ತದೆ. ಎಲ್ಲಾ ಆನೆಗಳು ೧,೦೦೦ ಕೆಜಿ ಭಾರ ಹೊರುವ ಸಾಮರ್ಥ್ಯ ಹೊಂದಿರುತ್ತವೆ. ಆದರೆ, ಮೆರವಣಿಗೆಯ ಜನಜಂಗುಳಿ ನಡುವೆ ಸಾಗುವ, ಸಿಡಿಮದ್ದು, ಪಟಾಕಿ ಶಬ್ದಕ್ಕೆ ಘಾಸಿಗೊಳ್ಳದ ಮನಸ್ಥಿತಿ ಹೊಂದಿರುವ ಆನೆಗಳನ್ನು ತಯಾರಿ ಮಾಡುವ ಕಾಯಕಕ್ಕೂ ಅರಣ್ಯ ಇಲಾಖೆ ಆದ್ಯ ನೀಡಬೇಕಿದೆ.
ಆರೋಗ್ಯ, ಸ್ವಭಾವ ಹಾಗೂ ದಸರೆಯಲ್ಲಿ ಭಾಗವಹಿಸಿದ ಅನುಭವದ ಮಾನದಂಡಗಳ ಆಧಾರದ ಮೇಲೆ ಆನೆ ಶಿಬಿರಗಳಿಗೆ ಅರಣ್ಯ ಇಲಾಖಾಧಿಕಾರಿಗಳ ತಂಡ ಭೇಟಿ ನೀಡಿ ಅಲ್ಲಿ ಆನೆಗಳ ಆರೋಗ್ಯ ವರದಿ ಪರಿಶೀಲಸಲಿದ್ದಾರೆ. ಆನೆಗಳನ್ನು ಕೂಬಿಂಗ್ ಕಾರ್ಯಾಚರಣೆಗೆ ಬಳಸಿ ಅವುಗಳ ಆರೋಗ್ಯದಲ್ಲಿಯೂ ಏರು ಪೇರಾಗಿರುತ್ತದೆ. ಮತ್ತೆ ಕೆಲವು ನಗರ ಪ್ರದೇಶಕ್ಕೆ ಮುಖ ಮಾಡದೇ ಅವುಗಳ ಸ್ವಭಾವದಲ್ಲಿಯೂ ವ್ಯತ್ಯಾಸ ಆಗಿರುತ್ತವೆ. ಇದೇ ಮೊದಲ ಬಾರಿಗೆ ಪ್ರೆಗ್ನೆನ್ಸಿ ತಪಾಸಣೆಗೂ ಮುಂದಾಗಿದೆ. ಹೀಗಾಗಿ ಆನೆಗಳ ಆಯ್ಕೆಯಲ್ಲಿ ಎಲ್ಲಾ ಅಂಶಗಳನ್ನು ಪರಿಗಣಿಸಿ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಅಂತಿಮ ಪಟ್ಟಿ ತಯಾರಿಸಿ ಇಲಾಖೆಯ ಮುಂದಿಡುತ್ತವೆ.
ಮತ್ತಿಗೋಡು ಶಿಬಿರದಿಂದ ಅಂಬಾರಿ ಆನೆ ಅಭಿಮನ್ಯು ತಂಡ ನಾಯಕನಾಗಿದ್ದರೆ, ಗೋಪಾಲಸ್ವಾಮಿ ಹೃದಯಾಘಾತದಲ್ಲಿ ಮೃತನಾಗಿದ್ದಾನೆ. ಆನೆಕಾಡು ಶಿಬಿರದ ವಿಕ್ರಮ, ದುಬಾರೆ ಶಿಬಿರದ ಕಾವೇರಿ, ಧನಂಜಯ, ನಾಗರಹೊಳೆಯ ದೊಡ್ಡ ಹರವೆ ಶಿಬಿರದ ಅಶ್ವತ್ಥಾಮ, ಬಂಡೀಪುರ ರಾಂಪುರ ಶಿಬಿರದ ಚೈತ್ರಾಳಿಗೂ ಅವಕಾಶ ಸಿಗಲಿವೆ. ಮೇಲ್ನೋಟಕ್ಕೆ ಕಳೆದೆರಡು ವರ್ಷ ಪಾಲ್ಗೊಂಡಿದ್ದ ಆನೆಗಳು ಪಟ್ಟಿಯಲ್ಲಿರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅಂತಿಮ ಅವುಗಳ ಆರೋಗ್ಯದ ಮೇಲೆ ನಿಂತಿದೆ ಎನ್ನಲಾಗುತ್ತಿದೆ. ಅರ್ಜುನ, ಗೋಪಾಲಸ್ವಾಮಿ ಆನೆಗಳು ಭಾಗಿಯಾಗುವುದಿಲ್ಲ. ಇತ್ತೀಚೆಗೆ ಕಾಡಾನೆ ದಾಳಿಯಿಂದ ಗೋಪಾಲಸ್ವಾಮಿ ಮೃತಪಟ್ಟಿದ್ದು, ವಯಸ್ಸಾದ ಕಾರಣ ದಸರಾ ಮಹೋತ್ಸವದಿಂದ ಅರ್ಜುನನಿಗೆ ಕೊಕ್ ನೀಡಲಾಗಿದೆ. ಇನ್ನು ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ದಸರಾ ಜಂಬೂಸವಾರಿ ಮೆರವಣಿಗೆ ಸಾಗಲಿದೆ. ಈಗಾಗಲೇ ಮತ್ತಿಗೋಡು ಶಿಬಿರಕ್ಕೆ ಭೇಟಿ ನೀಡಿ ೯ ಆನೆಗಳನ್ನು ಅಧಿಕಾರಿಗಳು ಗುರುತು ಮಾಡಿದ್ದಾರೆ.
ಭವಿಷ್ಯದ ಅಂಬಾರಿ ಶೂರರು!
ಅಂಬಾರಿ ಹೊರುವ ಆನೆಗೆ ಕನಿಷ್ಠ ೩ ರಿಂದ ೫ ವರ್ಷ ಅಭ್ಯಾಸ ಮಾಡುವುದು ಅಗತ್ಯ. ಅದಕ್ಕಾಗಿ ಈ ಕಳೆದ ಬಾರಿಯಿಂದಲೇ ಅಭಿಮನ್ಯುವಿಗೆ ಪರ್ಯಾಯವಾಗಿ ೨ನೇ ಹಂತದ ಆನೆಗಳಾಗಿ ಮಹೇಂದ್ರ, ಭೀಮ, ಅಶ್ವತ್ಥಾಮನಿಗೂ ತರಬೇತಿ ನೀಡುವ ಕೆಲಸವೂ ಮಾಡಿದ್ದರು.
ಯಾವ್ಯಾವ ಆನೆಗಳು ಪಟ್ಟಿ ಸೇರಬಹುದು!
ಅಭಿಮನ್ಯು, ದನಂಜಯ, ವಿಕ್ರಮ, ವಿಜಯ, ಗೋಪಿ, ಅಶ್ವಥಾಮ, ಪ್ರಶಾಂತ, ಶ್ರೀರಾಮ, ಲಕ್ಷ್ಮಣ, ಜಯಪ್ರಕಾಶ್, ಹರ್ಷ, ಗೋಪಾಲಸ್ವಾಮಿ, ಕಾವೇರಿ, ಚೈತ್ರಾ, ಭೀಮಾ, ರೋಹಿತ್, ಈಶ್ವರ, ವರಲಕ್ಷ್ಮಿ, ದುರ್ಗಾಪರಮೇಶ್ವರಿ ಮೊದಲಾದ ಆನೆಗಳು ಈ ಬಾರಿ ದಸರಾ ಗಜಪಡೆಯ ಪಟ್ಟಿ ಸೇರುವ ನಿರೀಕ್ಷೆಯಲ್ಲಿದ್ದು, ಅಂತಿಮವಾಗಿ ಮತ್ತಷ್ಟು ಆನೆಗಳ ಆರೋಗ್ಯ, ಸ್ವಭಾವದ ಪರೀಕ್ಷೆ ನಡೆಸಿ ಅರಣ್ಯಾಧಿಕಾರಿಗಳು ಪಟ್ಟಿ ಅಂತಿಮಗೊಳಿಸುವರು.
ಕಳೆದ ಬಾರಿ ಪಾಲ್ಗೊಂಡಿದ್ದ ಗಜಪಡೆ
೨೦೨೨ರ ಗಜಪಡೆಯಲ್ಲಿ ಬಂಡೀಪುರದ ರಾಮಪುರ ಆನೆ ಶಿಬಿರದ ಪಾರ್ಥಸಾರಥಿ (18), ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದ ಶ್ರೀರಾಮ (40) ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದ ಮಹೇಂದ್ರ (39) ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿವೆ. ಇದರಲ್ಲಿ ಪಾರ್ಥಸಾರಥಿ ಅತಿ ಚಿಕ್ಕ ವಯಸ್ಸಿನ ಆನೆ. ಉಳಿದಂತೆ ಅಂಬಾರಿ ಹೊರುವ ಅಭಿಮನ್ಯು(57), ಭೀಮ (22), ಗೋಪಾಲಸ್ವಾಮಿ (39), ಅರ್ಜುನ (63), ವಿಕ್ರಮ (59), ಧನಂಜಯ (44), ಕಾವೇರಿ (45), ಗೋಪಿ (41), ವಿಜಯ (63), ಚೈತ್ರ (49), ಲಕ್ಷ್ಮೀ (21) ಭಾಗವಹಿಸಿದ್ದವು.
ಭೀತಿಯೂ ತಪ್ಪಿಲ್ಲ
ಕಳೆದ ಮೂರು ವರ್ಷಗಳಲ್ಲಿ ಒಮ್ಮೆ ಶ್ರೀರಂಗಪಟ್ಟಣ ದಸರೆಗೆ ಹೋಗಿದ್ದಾ ಗೋಪಾಲಸ್ವಾಮಿ ಪಟಾಕಿ ಸದ್ದಿಗೆ ಹೆದರಿ ಒಂದು ಸುತ್ತು ಹಾಕಿ ಆತಂಕ ಸೃಷ್ಠಿಸಿದ್ದ. ಇನ್ನೂ ಲಕ್ಷ್ಮಿ ಯಾರ ಅರಿವಿಗೂ ಬಾರದಂತೆ ಮರಿಗೆ ಜನ್ಮ ನೀಡಿದ್ದು ಕೆಲವರ ಟೀಕೆಗೂ ಕಾರಣವಾಗಿತ್ತು. ಇನ್ನೂ ದನಂಜಯನೂ ಸಹ ಕೊಂಚ ವಾಹನ ಹಾಗೂ ಪಟಾಕಿ ಸದ್ದಿಗೆ ಹೆದರಿದ್ದೂ ಉಂಟು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆನೆಗಳ ಆವಾಭಾವವನ್ನು ಸಂಪೂರ್ಣವಾಗಿ ಅರಿತವರು ಮಾವುತ ಹಾಗೂ ಕಾವಾಡಿಗಳೇ ಆಗಿದ್ದಾರೆ. ಅವರ ಹೇಳಿಕೆಯನ್ನಾಧರಿಸಿಯೇ ವೈದ್ಯಾಧಿಕಾರಿಗಳು ಗಜಪಡೆಯ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ.