ಕೊಡಗು:- ರಾಜ್ಯದಲ್ಲಿ ಜೂನ್ ತಿಂಗಳಿನಿಂದ ಮುಂಗಾರು ಮಳೆ ಆರಂಭವಾಗಲಿದೆ. ಆದರೆ ಅದಕ್ಕೂ ಮುಂಚೆಯೇ ಮೇ ತಿಂಗಳಿನಿಂದಲೇ ರಾಜ್ಯದ ಹಲವೆಡೆ ಮಳೆರಾಯನ ಆರ್ಭಟ ಹೆಚ್ಚಾಗಿದ್ದು, ಇದರಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಲೇ ಇವೆ. ಇನ್ನು ಮುಂಗಾರು ಪೂರ್ವ ಮಳೆಯಿಂದ ಉಂಟಾದ ತೀವ್ರ ಪ್ರವಾಹದ ಬಿಕ್ಕಟ್ಟಿನಿಂದ ಕರ್ನಾಟಕ ತತ್ತರಿಸಿದ್ದು, ಅದರಲ್ಲೂ ಕೊಡಗು ಭೂಕುಸಿತದ ಭೀತಿಯನ್ನು ಎದುರಿಸುತ್ತಿದ್ದರೆ
ರಾಜ್ಯವು ಜೂನ್ ತಿಂಗಳಿನಿಂದ ಮುಂಗಾರು ಮಳೆಯನ್ನು ಸ್ವೀಕರಿಸಲು ಸಜ್ಜಾಗಿದೆ. ಇನ್ನು ಕಳೆದ ವರ್ಷ ಮುಂಗಾರು ಮಳೆಯಿಂದ ಭಾರಿ ಅನಾಹುತಗಳೇ ಸಂಭವಿಸಿದ್ದು, ಎಷ್ಟೋ ಜನರು ಪ್ರವಾಹದಂತಹ ಮಳೆಯಿಂದ ಮನೆ, ಮಠಗಳನ್ನು ಕಳೆದುಕೊಂಡ ಬೀದಿಗೆ ಬಂದಿದ್ದರು. ಮತ್ತೆ ಕೆಲವೆಡೆ ಪ್ರವಾಹವು ಸುಮಾರು ಜನರನ್ನು ತನ್ನ ಒಡಲಿನಲ್ಲಿ ಮುಳುಗಿಸಿಕೊಂಡಿತ್ತು. ಆದ್ದರಿಂದ ಈ ಬಾರಿ ಅಂತಹ ಅನಾಹುತಗಳು ಮರುಕಳಿಸಬಾರದೆಂದು ಜಿಲ್ಲಾವಾರು ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಲು ಮುಂದಾಗಿದ್ದಾರೆ.
ಕೊಡಗು ಜಿಲ್ಲೆಯ ಅಪಾಯಕಾರಿ ವಲಯಗಳು
ಇನ್ನು ಭೂಕುಸಿತ ಮತ್ತು ಪ್ರವಾಹದಿಂದಾಗಿ ಕೊಡಗು ಜಿಲ್ಲೆ ಐದು ವರ್ಷಗಳಿಂದ ರಾಜ್ಯದಲ್ಲಿ ಹೆಚ್ಚು ಹಾನಿಗೊಳಗಾಗುತ್ತಾ ಬಂದಿದೆ. ಆದ್ದರಿಂದ ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ, ಮಡಿಕೇರಿ ತಾಲೂಕಿನಿಂದ 768 ಕುಟುಂಬಗಳ 2,681 ಜನರನ್ನು ಸ್ಥಳಾಂತರಿಸುವ ಕುರಿತು ಜಿಲ್ಲಾಡಳಿತ ಈಗಾಗಲೇ ಸರ್ಕಾರಕ್ಕೆ ವರದಿ ಕಳುಹಿಸಿದೆ. ಹಾಗೂ ತುರ್ತು ಪರಿಸ್ಥಿತಿಗಳಿಗೆ ಹಾಜರಾಗಲು 26 ಶಿಬಿರಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಮಳೆಗಾಲ ಆರಂಭದ ಜೊತೆ ಸಾಂಕ್ರಾಮಿಕ ರೋಗಗಳ ಆತಂಕ: ಮುಂಜಾಗ್ರತಾ ಕ್ರಮಕ್ಕೆ ಡಿಸಿ ಆದೇಶಮಳೆಗಾಲ ಆರಂಭದ ಜೊತೆ ಸಾಂಕ್ರಾಮಿಕ ರೋಗಗಳ ಆತಂಕ: ಮುಂಜಾಗ್ರತಾ ಕ್ರಮಕ್ಕೆ ಡಿಸಿ ಆದೇಶ
ಸೋಮವಾರಪೇಟೆ ತಾಲೂಕಿನಲ್ಲಿ 1,143 ಕುಟುಂಬಗಳ 4,162 ಜನರನ್ನು ಸ್ಥಳಾಂತರಿಸಬೇಕು. ಮತ್ತು 30 ಶಿಬಿರಗಳನ್ನು ಸ್ಥಾಪಿಸಬೇಕು ಎಂದು ವರದಿ ಶಿಫಾರಸು ಮಾಡಿದೆ. ಅದೇ ರೀತಿ ವಿರಾಜಪೇಟೆ ತಾಲೂಕಿನಲ್ಲಿ 582 ಕುಟುಂಬಗಳ 2,049 ಜನರನ್ನು ಸ್ಥಳಾಂತರಿಸಬೇಕಾಗಿದ್ದು, 26 ಶಿಬಿರಗಳನ್ನು ತೆರೆಯಬೇಕಿದೆ. ಈ ಪ್ರದೇಶವು ಕಳೆದ ವರ್ಷ ವಿನಾಶವನ್ನು ಎದುರಿಸಿತು. ಆದ್ದರಿಂದ ಈ ಬಾರಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ಡಿಆರ್ಎಫ್) ಕೊಡಗು ಜಿಲ್ಲೆಗೆ ಆಗಮಿಸುತ್ತಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಕಳೆದ ಬಾರಿಯ ಮುಂಗಾರಿಗೆ ತತ್ತರಿಸಿದ್ದ ಜಿಲ್ಲೆಗಳು
ಹಾಗೆಯೇ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜನರು ಕೂಡ ಮಳೆಗೆ ತತ್ತರಿಸಿದ್ದು, ಇಲ್ಲಿನ ಕೃಷಿ ಭೂಮಿಗಳಿಗೆ ಭಾರಿ ಹಾನಿಯಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಆದ್ದರಿಂದ ಈ ಬಾರಿ ಅಧಿಕಾರಿಗಳು ಯಾವುದೇ ಅನಾಹುತಗಳು ಆಗದಂತೆ ಯುದ್ಧೋಪಾದಿಯಲ್ಲಿ ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಿಂದಾಗಿ ಏಪ್ರಿಲ್ನಿಂದ ಇಲ್ಲಿಯವರೆಗೆ ಆಸ್ತಿಪಾಸ್ತಿ ಹಾನಿಯೊಂದಿಗೆ 52 ಸಾವುಗಳು ವರದಿ ಆಗಿವೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿಕೆ ನೀಡಿದ್ದು, ಇದಕ್ಕೆ ತಕ್ಷಣ ಪರಿಹಾರ ನೀಡುವಂತೆಯೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. 20,000 ಹೆಕ್ಟೇರ್ನಲ್ಲಿ ಬೆಳೆ ನಷ್ಟ ಹಾಗೂ 814 ಮನೆಗಳಿಗೆ ಹಾನಿಯಾಗಿದ್ದು, ಒಟ್ಟು 331 ಜಾನುವಾರುಗಳು ತೊಂದರೆಗೀಡಾಗಿವೆ ಎಂದು ತಿಳಿಸಿದ್ದರು.
ಕಳೆದ ಬಾರಿ ಉತ್ತರ ಕರ್ನಾಟಕ, ಕರಾವಳಿ ಭಾಗ, ಮಡಿಕೇರಿ ಜಿಲ್ಲೆಯ ಭಾಗಗಳಲ್ಲಿ ಮಳೆಯಿಂದ ಅಪಾನ ಹಾನಿ ಸಂಭವಿಸಿತ್ತು. ಈ ಹಾನಿಯಿಂದ ಜನರು ಮೇಲೆ ಎದ್ದು ಬರಲು ವರ್ಷವೇ ಬೇಕಾಯಿತು. ಆದ್ದರಿಂದ ಈ ಬಾರಿ ಯಾವುದೇ ಅನಾಹುತಗಳು ಸಂಭವಿಸಬಾರದೆಂದು ಜಿಲ್ಲಾವರು ಅಧಿಕಾರಿಗಳು ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ.
ಅದರಲ್ಲೂ ಹೇಳಿಕೇಳಿ ಚಿಕ್ಕಮಗಳೂರು ಮತ್ತು ಮಡಿಕೇರಿ ಜಿಲ್ಲೆಗಳು ಅಚ್ಚುಮೆಚ್ಚಿನ ಪ್ರವಾಸಿ ತಾಣಗಳನ್ನು ಹೊಂದಿವೆ. ಪ್ರವಾಸಿಗರು ಈ ಜಿಲ್ಲೆಗಳಿಗೆ ಹೆಚ್ಚಾಗಿ ಆಗಮಿಸುವುದು ಕೂಡ ಮುಂಗಾರು ಮಳೆ ಸಮಯದಲ್ಲಿ. ಆದ್ದರಿಂದ ಯಾವುದೇ ಅನಾಹುತಗಳು ಸಂಭವಿಸಬಾರದೆಂದು ಈ ಜಿಲ್ಲೆಗಳ ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಕ್ರಮಕ್ಕೆ ಸಜ್ಜಾಗಿವೆ.