ಬೆಂಗಳೂರು: ರಾಜ್ಯ ಬಿಜೆಪಿ ಸಹ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಅವರನ್ನು ಸಂಸದ ತೇಜಸ್ವಿ ಸೂರ್ಯ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಎಂದು ಪರಿಚಯಿಸಿ ಕುತೂಹಲ ಮೂಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳಿಗೆ ನರೇಂದ್ರ ಮೋದಿ ಅವರು ಸೋಮಣ್ಣ ಎಂಬ ಸರ್ಜಿಕಲ್ ಸ್ಟ್ರೈಕ್ ಅಸ್ತ್ರವನ್ನು ಬಳಸಿದ್ದಾರೆ. ಎರಡು ಕ್ಷೇತ್ರಗಳಲ್ಲೂ ಗೆದ್ದುಕೊಂಡು ಬರುತ್ತೇವೆ. ಚಾಮರಾಜನಗರ ಮತ್ತು ಮೈಸೂರಿನಲ್ಲಿ 8 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದುಕೊಂಡು ಬರುತ್ತೇವೆ. ಇಲ್ಲಿ ಗೋವಿಂದರಾಜನಗರ ಮತ್ತು ವಿಜಯನಗರ ಎರಡು ಕ್ಷೇತ್ರಗಳನ್ನು ಗೆದ್ದುಕೊಂಡು ಬರುತ್ತೇವೆ. ಸೋಮಣ್ಣ ಅವರ ಪ್ರಭಾವದಿಂದ 10-12 ಕ್ಷೇತ್ರ ಗೆಲ್ಲಿಸಿಕೊಂಡು ಬರುತ್ತೇವೆ. ಗೋವಿಂದರಾಜನಗರದಲ್ಲಿ ನಾನು ಸೋಮಣ್ಣ ಅವರು ಜೋಡೆತ್ತುಗಳಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಸೂರ್ಯ ಅಣ್ಣಾಮಲೈ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಡಲು ಮುಂದಾದಾಗ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಮುಂದಿನ ವಿಚಾರವನ್ನು ಮಾತನಾಡುತ್ತಾರೆ ಎಂದು ಹೇಳಿ ಮೈಕ್ ಅನ್ನು ಅವರ ಕೈಗೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅಣ್ಣಾಮಲೈ, ಕರ್ನಾಟಕ ಪೊಲಿಟಿಕಲ್ ಚಿತ್ರಣವನ್ನು ಬದಲಾವಣೆ ಮಾಡಲಿಕ್ಕೆ ಸೋಮಣ್ಣನವರು ಹೊರಟಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಮಾಡಲು ಅವರು ಮುಂದಾಗಿದ್ದಾರೆ. ಚಾಮರಾಜನಗರ, ವರುಣಾದಲ್ಲಿ ಬದಲಾವಣೆ ಮಾಡುತ್ತಾರೆ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯರನ್ನು ಗೇಲಿ ಮಾಡಿದ ಅಣ್ಣಾಮಲೈ, ಸಿದ್ದರಾಮಯ್ಯ ಸಾಹೇಬ್ರು ನಾಮಿನೇಷನ್ ಮಾಡಿ ನಾನು ಪ್ರಚಾರ ಮಾಡಲ್ಲ ಅಂದಿದ್ದರು. ಆದರೆ ಈಗ ಅವರು ವರುಣಾ ಬಿಟ್ಟು ಹೊರಗಡೆ ಬರುತ್ತಲೇ ಇಲ್ಲ ಎಂದು ವ್ಯಂಗ್ಯವಾಡಿದರು.