ಮೈಸೂರು: ಮೈಸೂರು ನಗರಾಭಿವೃದ್ಧಿ(ಮುಡಾ) ಪ್ರಾಧಿಕಾರದ ಹಗರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರಾಜೀನಾಮೆ ನೀಡಬೇಕು ಮತ್ತು ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು.ನಗರದ ರಾಮಸ್ವಾಮಿ ವೃತ್ತದಲ್ಲಿ ಗುರುವಾರ ಬೆಳಿಗ್ಗೆ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಜೆ.ಎಲ್.ಬಿ ರಸ್ತೆಯಲ್ಲಿರುವ ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಆಗಮಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಅರ್ಧದಲ್ಲಿಯೇ ತಡೆದು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದರು. ನಂತರ ಬಿಡುಗಡೆ ಮಾಡಿದರು.ಇದಕ್ಕೂ ಮೊದಲು ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್,ಮುಡಾ ಪ್ರಕರಣದ ಕೇಸ್ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ.
4,500 ಕೋಟಿ ರೂ. ಹಗರಣದ ಆಗಿದೆ. ಅಧಿಕಾರಿಗಳನ್ನು ಜೈಲಿಗೆ ಹಾಕಬೇಕಾಗಿತ್ತು. ಆದರೆ ಸಚಿವರು ತಾವು ರಕ್ಷಣೆ ಆಗುವ ಮೂಲಕ ಅಧಿಕಾರಿಗಳನ್ನು ರಕ್ಷಿಸಿ ಬೂಟಾಟಿಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಲೂಟಿ ಆಗಿದೆ. ಇಲ್ಲಿಂದ ಹಣವನ್ನು ಲೂಟಿ ಮಾಡಿ ತೆಲಂಗಾಣಕ್ಕೆ ವರ್ಗಾವಣೆ ಮಾಡುತ್ತಿದ್ದಾರೆ. ಎಸ್ಸಿ ಎಸ್ಟಿ ಗಳಿಗೆ ಮೀಸಲಿಟ್ಟ ಹಣವನ್ನು ಪುಕ್ಕಟೆ ಗ್ಯಾರಂಟಿಗೆ ಉಪಯೋಗಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯರವರು ದಲಿತಪರ ಎಂದು ಹೇಳುತ್ತಲೆ ದಲಿತರ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಹಾಲಿನ ದರವನ್ನು ಏರಿಸಿದರು. ಸಮ್ಮಾನ್ ಯೋಜನೆಯನ್ನು ಕಿತ್ತು ಹಾಕಿದರು. ಸಂವಿಧಾನದ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯ ಮೇಲೆ ಗೂಬೆ ಕೂರಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ.. ಕಾಂಗ್ರೆಸ್ ದಲಿತರ ಪರ ಇಲ್ಲ ಬಿಜೆಪಿ ದಲಿತರ ಪರ ಇದೆ ಎಂದು ಹೇಳಿದರು.
ಮುಡಾದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಬೈರತಿ ಸುರೇಶ್ ರವರು ರಾಜೀನಾಮೆ ಕೊಡಬೇಕು. ಹಾಗೂ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ ಬಿಜೆಪಿ ಮುಖಂಡರಾದ ಜೋಗಿಮಂಜು,ಸಚಿನ್, ನಿಶಾಂತ್, ಕಿರಣ್, ಮಂಜುನಾಥ್ ಸೇರಿ ಹಲವರು ಭಾಗವಹಿಸಿದ್ದರು.