ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡು, ಅದೇ ಪಕ್ಷದಿಂದಲೇ ಸಂಸದೆಯೂ ಆಗಿ ಅತೀ ಕಡಿಮೆ ಅವಧಿಯಲ್ಲೇ ರಾಷ್ಟ್ರೀಯ ಪಕ್ಷವೊಂದರ ಉನ್ನತ ಹುದ್ದೆಯಲ್ಲೂ ಇದ್ದ ರಮ್ಯಾ ವಿಧಾನಸಭೆ ಚುನಾವಣೆಯ ಹೊತ್ತಿನಲ್ಲಿ ಅಚ್ಚರಿಯ ಸುದ್ದಿಯೊಂದನ್ನು ನೀಡಿದ್ದಾರೆ. ನಿಜವಾಗಿಯೂ ರಮ್ಯಾ ಅವರಿಗೆ ಅಷ್ಟೊಂದು ಡಿಮಾಂಡ್ ಇತ್ತಾ ಎನ್ನುವ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲೇ ಚರ್ಚೆಗೆ ಕಾರಣವಾಗಿದೆ.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ರಮ್ಯಾ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎನ್ನುವ ಮಾತಿತ್ತು. ಈ ಕುರಿತು ರಮ್ಯಾ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೂ, ಕಾಂಗ್ರೆಸ್ ಅವರಿಗೆ ಟಿಕೆಟ್ ಘೋಷಣೆ ಮಾಡುತ್ತದೆ ಎಂದು ನಂಬಲಾಗಿತ್ತು. ಕೊನೆಯ ಕ್ಷಣದಲ್ಲಿ ರಮ್ಯಾ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲಿಲ್ಲ. ಈ ಕುರಿತು ಅವರು ವಾಹಿನಿಯೊಂದರ ಜೊತೆ ಮಾತನಾಡಿದ್ದಾರೆ.
“ನನಗೆ ಮೂರು ಪಕ್ಷಗಳಿಂದಲೂ ಆಫರ್ ಇತ್ತು. ಸಲೂನ್ ವೊಂದರಲ್ಲಿ ಆಕಸ್ಮಿಕವಾಗಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಭೇಟಿಯಾಗಿದ್ದರು. ರಾಜಕಾರಣದಿಂದ ನೀವು ದೂರ ಇರಬಾರದು ಎಂದು ಹೇಳಿದ್ದರು. ಮತ್ತೆ ರಾಜಕೀಯ ಕ್ಷೇತ್ರಕ್ಕೆ ವಾಪಸ್ಸಾಗಿ ಎಂದು ಸಲಹೆ ನೀಡಿದ್ದರು. ಆರು ಕ್ಷೇತ್ರಗಳಲ್ಲಿ ನೀವು ಯಾವುದಾದರೂ ಕ್ಷೇತ್ರ ಆರಿಸಿಕೊಳ್ಳಿ, ಟಿಕೆಟ್ ನೀಡುತ್ತೇವೆ ಎಂದಿದ್ದರು ಕುಮಾರಸ್ವಾಮಿ’ ಎಂದಿದ್ದಾರೆ.
ಮುಂದುವರೆದು ಮಾತನಾಡಿರುವ ರಮ್ಯಾ, ‘ಚುನಾವಣೆಗೂ ಮುನ್ನ ಬಿಜೆಪಿ ಕೂಡ ನನ್ನನ್ನ ಸಂಪರ್ಕಿಸಿತ್ತು. ದೊಡ್ಡ ದೊಡ್ಡ ನಾಯಕರೇ ಸಂಪರ್ಕ ಮಾಡಿದ್ದರು. ಮಂತ್ರಿ ಮಾಡುತ್ತೇವೆ, ನೀವು ನಮ್ಮ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಹೇಳಿದರು. ನಾನು ಒಪ್ಪಲಿಲ್ಲ’ ಎಂದು ಮತ್ತೊಂದು ಅಚ್ಚರಿಯ ಸುದ್ದಿಯನ್ನೂ ರಮ್ಯಾ ಮಾತನಾಡಿದ್ದಾರೆ. ತಮ್ಮ ನಿಷ್ಠೆ ಏನೇ ಇದ್ದರೂ ಅದು ಕಾಂಗ್ರೆಸ್ ಪಕ್ಷಕ್ಕೆ ಎಂದಿರುವ ಅವರು, ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ.