ಮೇಲುಕೋಟೆ : ಭಗವದ್ ರಾಮಾನುಜಾಚಾರ್ಯರ ಆರಿದ್ರಾ ಮಾಸನಕ್ಷತ್ರ ಕೂಡಿದ ಶುಭದಿನವಾದ ಕೊನೆಯ ಶ್ರಾವಣದಂದು ಪ್ರಖ್ಯಾತ ಶ್ರೀವೈಷ್ಣವ ಕ್ಷೇತ್ರ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ಸನ್ನಿಧಿಗೆ ಭಕ್ತಸಾಗರವೇ ಹರಿದು ಬಂದಿತ್ತು. ನಾಡಿನ ವಿವಿಧ ಭಾಗಗಳಿಂದ ಕುಟುಂಬಸಮೇತರಾಗಿ ತಂಡೋಪತಂಡವಾಗಿ ಆಗಮಿಸುತ್ತಿದ್ದ ಭಕ್ತರು ಕಲ್ಯಾಣಿಯಲ್ಲಿ ಸ್ನಾನ ಮತ್ತು ಪವಿತ್ರ ತೀರ್ಥಪ್ರೋಕ್ಷಣೆಮಾಡಿಕೊಂಡು ಹಣೆಗೆ ತಿರುನಾಮಧರಿಸಿ ಮನೆದೇವರಾದ ಶ್ರೀಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಶ್ರೀಯೋಗಾನರಸಿಂಹಸ್ವಾಮಿಯ ದರ್ಶನಪಡೆದು ಪುನೀತಭಾವ ಅನುಭವಿಸಿದರು. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹ ಕಾರ್ಯಕರ್ತರೊಂದಿಗೆ ಆಗಮಿಸಿ ದೇವರದರ್ಶನ ಪಡೆದರು.
ನಿರಂತರವಾಗಿ ಸಾರಿಗೆ ಸಂಸ್ಥೆಯ ವಿಶೇಷ ಬಸ್ಗಳು ಹಾಗೂ ವಿವಿಧ ವಾಹನಗಳಮೂಲಕ ಬರುತ್ತಿದ್ದ ಭಕ್ತರಿಂದಾಗಿ ಇಡೀ ದಿನ ಮೇಲುಕೋಟೆ ಭಕ್ತರಿಂದ ತುಂಬಿತುಳುಕುತ್ತಿತ್ತು ಎಲ್ಲಾ ಪಾರ್ಕಿಂಗ್ ಸ್ಥಳಗಳೂ ವಾಹನಗಳಿಂದ ಭರ್ತಿಯಾದ ಪರಿಣಾಮ ರಸ್ತೆಯಲ್ಲೇ ಪಾರ್ಕಿಂಗ್ ಮಾಡಿದ ದೃಶ್ಯ ಕಂಡು ಬಂತು
ಕಲ್ಯಾಣಿಯಿಂದ ಮೆಟ್ಟಲುಹತ್ತಿ ಯೋಗಾನರಸಿಂಹಸ್ವಾಮಿ ಬೆಟ್ಟಕ್ಕೆ ಭಕ್ತರು ಸಾಗುತ್ತಿದ್ದ ವೇಳೆ ಬೆಟ್ಟದ 60ನೇ ಮೆಟ್ಟಿಲಿನಿಂದ ರಾಜಗೋಪುರದವರೆಗೆ ಜನದಟ್ಟಣೆ ವಿಪರೀತವಾದಕಾರಣ ದೇವರದರ್ಶನಕ್ಕೆ ಹೋಗಲು ಮತ್ತು ದರ್ಶನ ಮುಗಿಸಿ ಕೆಳಕ್ಕೆ ಇಳಿಯಲು ಮಹಿಳೆಯರು ಮಕ್ಕಳು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಭಕ್ತರ ಸುಗಮ ದರ್ಶನಕ್ಕಾಗಿ ಕೆಲಕಾಲ ಟಿಕೇಟ್ ನೀಡದೆ ವಿಶೇಷ ದರ್ಶನವನ್ನೂ ಸ್ಥಗಿತಗೊಳಿಸಲಾಗಿತ್ತು. ಬೆಳಿಗ್ಗೆ 5ಗಂಟೆಗೆ ದೇವಾಲಯದಲ್ಲಿ ನಿತ್ಯಪೂಜೆ ಆರಂಭಿಸಿ ಬೆಳಿಗ್ಗೆ 7ಗಂಟೆಯಿಂದ ತಡೆರಹಿತವಾಗಿ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ಬೆಟ್ಟದಲ್ಲಿ ಭಕ್ತರ ದರ್ಶನಕ್ಕೆ ಅನುವುಮಾಡಿಕೊಡಲಾಗಿತ್ತು. ಶಾಸಕರೊಂದಿಗೆ ವಕೀಲ ಕಾಡೇನಹಳ್ಳಿ ಸತೀಶ್, ನರಹಳ್ಳಿ ಜ್ಞಾನೇಶ್, ಸೇರಿದಂತೆ ನೂರಾರು ರೈತಸಂಘದ ಕಾರ್ಯಕರ್ತರು ಆಗಮಿಸಿದ್ದರು. ಮೇಲುಕೋಟೆಯ ವಿವಿಧ ಸ್ಥಳಗಳಲ್ಲಿ ಅಂಗಡಿ ಇಟ್ಟುಕೊಂಡಿದ್ದ ಕಡಲೇಪುರಿ, ಸಿಹಿತಿಂಡಿ, ಪುಳಿಯೋಗರೆ, ಪಾನೀಯಗಳು ಹಾಗೂ ತಿಂಡಿತಿನಿಸುಗಳ ವ್ಯಾಪಾರಸ್ಥರು ಭರ್ಜರಿ ವ್ಯಾಪಾರಮಾಡಿದರು.