ಮೈಸೂರು: ಮೈಸೂರು ನಗರ ಹೊರವಲಯದಲ್ಲಿ ಕರ್ನಾಟಕ ಮೃಗಾಲಯ ಅಭಿವೃದ್ದಿ ಪ್ರಾಧಿಕಾರ ರೂಪಿಸಿರುವ ಕೂರ್ಗಳ್ಳಿ ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿ ಕುಸುಮಾಲೆ ಹಾಗೂ ಸೋಮುವಿನ ಪ್ರೀತಿ ಒಡನಾಟ, ತಾಯ್ತನದ ಖುಷಿಯನ್ನು ನೋಡುವುದೇ ಚೆಂದ.
ಹೌದು ಇತ್ತೀಚಿಗೆ ಆಸ್ಕರ್ ಪ್ರಶಸ್ತಿ ಪಡೆದ ಎಲೆಫೆಂಟ್ ವಿಸ್ಪರರ್ಸ್ ಚಿತ್ರ ಹೋಲುವ ಕಥೆ. ಅಲ್ಲಿ ಬೊಮ್ಮನ್ ಹಾಗೂ ಬೆಳ್ಳಿ ರಘುವನ್ನು ಆರೈಕೆ ಮಾಡಿದರೆ ಇಲ್ಲಿ ಕುಸುಮಾಲೆಯನ್ನು ನೋಡಿಕೊಳ್ಳುವಾತ ಸೋಮು. ಮೈಸೂರಿನಲ್ಲಿದೆ ಈ ಕುಸುಮಾಲೆ ಕಥಾನಕ. ಮೈಸೂರು ನಗರ ಹೊರವಲಯದಲ್ಲಿ ಕರ್ನಾಟಕ ಮೃಗಾಲಯ ಅಭಿವೃದ್ದಿ ಪ್ರಾಧಿಕಾರ ರೂಪಿಸಿರುವ ಕೂರ್ಗಳ್ಳಿ ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿ ಇಂತಹದೊಂದು ವಿಶೇಷತೆ ಮನೆ ಮಾಡಿದೆ.
ಬಿಳಿಗಿರಿರಂಗನ ಬೆಟ್ಟ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟು ಬಂದ ತಿಂಗಳ ಮರಿಗೆ ಬಿಳಿಗಿರಿರಂಗಪ್ಪನ 2ನೇ ಪತ್ನಿ ಕುಸುಮಾಲೆ ಹೆಸರನ್ನೇ ನಾಮಕರಣ ಮಾಡಲಾಗಿದೆ. ಕುಸುಮಾಲೆ ಪುನವರ್ಸತಿ ಕೇಂದ್ರದ ಆಕರ್ಷಣೆ. ಎರಡು ವರ್ಷದ ನಂತರ ಆಕೆ ಸಾಮಾನ್ಯ ಶಿಬಿರಕ್ಕೆ ತೆರಳಲಿದ್ದಾಳೆ. ಇವರೊಂದಿಗೆ ಇರುವವಳು 78 ರ ಇಳಿ ವಯಸ್ಸಿನ ಪದ್ಮಾವತಿ. ಆಕೆ ನೀರಿಗಿಳಿದು ಈಜತೊಡಗಿದರೆ ವಯಸ್ಸನ್ನೇ ಮರೆತು ಬಿಡುತ್ತಾಳೆ. ಜತೆಗೆ ಐರಾವತಿ, ನಯನ ಆನೆಗಳಿದ್ದರೆ ಕುಸುಮಾಲೆ ಮರಿಯಾನೆಯ ಖುಷಿಗೆ ಪಾರವೇ ಇಲ್ಲ.
ಬೇರೆ ಬೇರೆ ಕಾಡಿನಿಂದ ತಂಡವನ್ನು ಬೇರ್ಪಟ್ಟು ಬಂದರೂ ಒಂದೇ ಮನೆಯವರಂತೆ ಬದುಕುವ ಆನೆಗಳ ಈ ಲೋಕವೇ ಚೆಂದ. ಇವುಗಳ ಉಸ್ತುವಾರಿ ಹೊತ್ತ ಆನೆ ಪಾಲಕ ಸೋಮನ ಕಾಳಜಿಯನ್ನು ಮೆಚ್ಚುವಂತದ್ದಾಗಿದೆ. ನಾಲ್ಕೈದು ವರ್ಷದಿಂದ ಐದು ಮರಿಗಳಿಗೆ ಈವರೆಗೂ ಈತನೇ ತಾಯಿ. ಎರಡು ಗಂಟೆಗೊಮ್ಮೆ ಹಾಲು ಕುಡಿಸಬೇಕು. ಹಗಲು ರಾತ್ರಿಯೂ. ಸೋಮನ ಆರೈಕೆಯಲ್ಲಿ ಆನೆ ಮರಿಗಳು ತಾಯಿ ಸುಖ ಕಂಡು ಬೆಳೆದಿವೆ. ಹಾಲಿನ ಜತೆಗೆ ಔಷಧಗಳು, ಬೆಲ್ಲ, ಅಕ್ಕಿ, ರಾಗಿ ಮಿಶ್ರಿತ ಆಹಾರವನ್ನು ಆನೆ ಮರಿಗೆ ನೀಡಲಾಗುತ್ತದೆ.
ತಾಯಿಯಿಂದ ಬೇರ್ಪಟ್ಟ ಆನೆ ಮರಿಗಳನ್ನು ತಾಯಿ ಸೇರಿಸುವುದು ಬಹಳ ಕಡಿಮೆ. ಅಂತಹ ಮರಿಗಳು ಕಾಡಿನಿಂದ ಹೊರ ಬಂದಾಗ ಅಥವಾ ಇಲಾಖೆಯವರಿಗೆ ಸಿಕ್ಕಾಗ ಅದನ್ನು ಕೂರ್ಗಳ್ಳಿ ಪ್ರಾಣಿ ಪುನರ್ವಸತಿ ಕೇಂದ್ರಕ್ಕೆ ತರುತ್ತಾರೆ. ಇಲ್ಲಿನ ಅಧಿಕಾರಿಗಳು, ಸಿಬ್ಬಂದಿ ಆರೈಕೆ ಮಾಡುತ್ತಾರೆ.
ಪ್ರಾಣಿಗಳ ಆಶ್ರಯ ತಾಣ
125 ವರ್ಷಗಳ ಇತಿಹಾಸ ಇರುವ ಮೈಸೂರು ಶ್ರೀ ಜಯಚಾಮರಾಜೇಂದ್ ಮೃಗಾಲಯದ ಪ್ರಾಣಿ, ಪಕ್ಷಿಗಳ ಮೇಲಿನ ಪ್ರೀತಿಗೆ ಕೈ ಗನ್ನಡಿಯಾಗಿದೆ ಕೂರ್ಗಳ್ಳಿ ಪ್ರಾಣಿ ಪುನರ್ವಸತಿ ಕೇಂದ್ರ. ಕಾಡಿನ ಪ್ರಾಣಿಗಳನ್ನು ರಕ್ಷಿಸಿ ಮೃಗಾಲಯಕ್ಕೆ ತರಲಾಗುತ್ತಿತ್ತು. ಹೀಗಾಗಿ ಮೃಗಾಲಯದ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ನಿರ್ಮಾಣಗೊಂಡ ಪುನರ್ ವಸತಿ ಕೇಂದ್ರ ಈಗ ಕಾಡಿನಲ್ಲಿ ತೊಂದರೆಗೆ ಒಳಗಾದ ಪ್ರಾಣಿಗಳಿಗೆ ಪ್ರೀತಿ ತೋರುವುದರಲ್ಲಿ ಪ್ರಾಣಿಗಳಿಗೆ ಆಶ್ರಯ ತಾಣವಾಗಿರುವುದು ವಿಶೇಷ.
ನಿಜ ತಾಯಿಯಾದ ನಯನ..!
ಏ ಕುಸುಮಾಲೆ ಬಾ ಇಲ್ಲಿ ಎಂದು ಪ್ರೀತಿಯಿಂದಲೇ ಕರೆದರು ಹಿರಿಯ ಐಎಫ್ಎಸ್ ಅಧಿಕಾರಿ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ. ತನ್ನನ್ನು ನಿತ್ಯ ನೋಡಿಕೊಳ್ಳುವ ಸೋಮು ಜತೆಗಿದ್ದ 8 ತಿಂಗಳ ಆನೆ ಮರಿ ಪುಟ ಪುಟ್ಟ ಹೆಜ್ಜೆ ಹಾಕುತ್ತಲೇ ಅತ್ತಲಿಂದ ಬರತೊಡಗಿತು. ಹತ್ತಿರ ಬರುತ್ತಲೇ ಏನು ಕೂಸೆ ಎಂದು ತಲೆಯನ್ನು ತಡವಿದರು ರವಿ. ಕುಸುಮಾಲೆಯೂ ರವಿ ಅವರತ್ತ ಪುಟ್ಟ ಸೊಂಡಿಲೆತ್ತಿ ಪ್ರೀತಿ ತೋರಿತು. ಅದಕ್ಕೆ ಏನೋ ಸಂತಸ. ಪುಳಕ. ಊಟ ಮಾಡಿದೆಯಾ ಎಂದು ಕೇಳಿದರು. ಅದಕ್ಕೆ ಖುಷಿಯೋ ಖುಷಿ. ಅಲ್ಲಿದ್ದವರು ತನ್ನನ್ನು ನೋಡಲು ಬಂದಿದ್ದಾರೆ ಎನ್ನುವ ಸಂತಸದಲ್ಲಿ ಅತ್ತಿಂದಿತ್ತ ಒಂದೆರಡು ಸುತ್ತು ಹಾಕುತ್ತಿದ್ದ ಕುಸುಮಾಲೆಯನ್ನು ಹುಡುಕಿಕೊಂಡು ಬಂದಿದ್ದು ನಯನ.
ಆಕೆ 12 ವರ್ಷದ ಪ್ರಾಯದವಳು. ಪಕ್ಕದ ತೊಟ್ಟಿಯಲ್ಲಿ ಜಲಕ್ರೀಡೆಯಲ್ಲಿ ತೊಡಗಿದ್ದ ನಯನಗೆ ಕುಸುಮಾಲೆಯನ್ನು ಕರೆಯುತ್ತಿದ್ದಾರೆ ಎನ್ನುವ ಅರ್ಥವಾಗಿತ್ತು. ಕೂಡಲೇ ಆಕೆಯೂ ಕುಸುಮಾಲೆ ಇದ್ದತ್ತಲೇ ಓಡಿಬಂದಿದ್ದಳು. ನಯನಗೆ ಹುಟ್ಟದೇ ಇದ್ದರೂ ಎಂಟೇ ತಿಂಗಳಲ್ಲಿ ಕುಸುಮಾಲೆಯ ನಿಜ ತಾಯಿಯೇ ಆಗಿ ಹೋಗಿದ್ದಾಳೆ ನಯನ.