ಮೈಸೂರು:- ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಹಾಗೂ ಬಂಡೀಪುರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ವಿಶೇಷ ಭದ್ರತಾ ತಂಡ (ಎಸ್ಪಿಜಿ) ಮೈಸೂರಿನಲ್ಲಿ ಶುಕ್ರವಾರ ಭದ್ರತಾ ರಿಹರ್ಸಲ್ ನಡೆಸಿತು.
ಏಪ್ರಿಲ್ 8ರಂದು ಪ್ರಧಾನಿ ಮೋದಿ ಅವರು ವಾಸ್ತವ್ಯ ಹೂಡುವ ಹೋಟೆಲ್ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಬಾನೋತ್ ಅವರು ಎಸ್ಪಿಜಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ವಿಮಾನ ನಿಲ್ದಾಣದಿಂದ ಪ್ರಧಾನಿಗಳು ಕಾರಿನಲ್ಲಿ ಸಾಗುವ ಹೋಟೆಲ್ವರೆಗೂ ಹಾಗೂ ನಂಜನಗೂಡು ರಸ್ತೆಯಲ್ಲಿ ಯಾವುದೇ ರೋಡ್ ಹಂಪ್ ಇರಬಾರದು. ರಿಂಗ್ ರೋಡ್ ಜಂಕ್ಷನ್ನಲ್ಲಿ ಸಿಗ್ನಲ್ ಆನ್ ಮಾಡಿ ಶೂನ್ಯ ಸಂಚಾರಿ ವ್ಯವಸ್ಥೆ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಸಿದರು.
ಮೈಸೂರಿನಲ್ಲಿ ಬೀಡುಬಿಟ್ಟ ಎಸ್ಜಿಪಿ ತಂಡ
ನವದೆಹಲಿಯಿಂದ ಆಗಮಿಸಿರುವ ಎಸ್ಪಿಜಿ ಅಧಿಕಾರಿಗಳು ಮೈಸೂರಿನಲ್ಲಿ ಬೀಡು ಬಿಟ್ಟಿದ್ದು, ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಶುಕ್ರವಾರ ಎಸ್ಪಿಜಿ ಅಧಿಕಾರಿಗಳು ಮೋದಿ ತಂಗುವ ರ್ಯಾಡಿಸನ್ ಬ್ಲೂ ಹೋಟೆಲ್ನಿಂದ ಹಿಡಿದು ಕರ್ನಾಟಕ ರಾಜ್ಯ ಮುಕ್ತ ವಿವಿವರೆಗೂ ಭದ್ರತಾ ರಿಹರ್ಸಲ್ ನಡೆಸಿದರು. ಇದೇ ಓವಲ್ ಮೈದಾನದಲ್ಲಿ ಹೆಲಿಪ್ಯಾಡ್ ಇಳಿಸುವ ರಿಹರ್ಸಲ್ ಕೂಡ ನಡೆಯಿತು.
ಮಂಡಕಳ್ಳಿ ವಿಮಾನ ನಿಲ್ದಾಣ, ಸುತ್ತಲಿನ ಕಾಂಪೌಂಡ್, ನಂಜನಗೂಡು ರಸ್ತೆ, ಕ್ರಾರ್ಡ್ ಹಾಲ್ ಎದುರಿನ ತಾತ್ಕಾಲಿಕ ಹೆಲಿಪ್ಯಾಡ್, ಹುಣಸೂರು ರಸ್ತೆಯ ಮುಕ್ತ ವಿವಿ ಘಟಿಕೋತ್ಸವ ಭವನ, ಎಂಜಿ ರಸ್ತೆಯಲ್ಲಿರುವ ರ್ಯಾಡಿಸನ್ ಬ್ಲೂ ಹೋಟೆಲ್ ಹಾಗೂ ಮೋದಿ ಅವರು ಸಾಗುವ ಮಾರ್ಗಗಳಲ್ಲಿ ಭದ್ರತಾ ಕಾರ್ಯಗಳನ್ನು ಪರಿಶೀಲಿಸಿದರು.
ಮೈಸೂರಿಗೆ 4ನೇ ಬಾರಿಗೆ ಆಗಮನ
ಇಲ್ಲಿಯವರೆಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ನರೇಂದ್ರ ಮೋದಿ ಅವರು 7 ಬಾರಿ ಆಗಮಿಸಿದ್ದಾರೆ. ಪ್ರಧಾನಿಯಾದ ನಂತರ ಇದು ನಾಲ್ಕನೇ ಬಾರಿ ಮೈಸೂರಿನಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಕಳೆದ ವರ್ಷ ಯೋಗ ದಿನಾಚರಣೆ ಅಂಗವಾಗಿ ಮೈಸೂರಿಗೆ ಮೋದಿ ಭೇಟಿ ನೀಡಿದ್ದರು. ಈವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದಿರುವ ಐದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಮೋದಿ, ಇದೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಏಪ್ರಿಲ್ 9ರಂದು ಬೆಳಗ್ಗೆ ಬೊಮ್ಮನ್ ಹಾಗೂ ಬೆಳ್ಳಿ ವಾಸವಿರುವ ತಮಿಳುನಾಡಿನ ಮಧುಮಲೈ ಆನೆ ಶಿಬಿರಕ್ಕೆ ಮೋದಿ ಭೇಟಿ ನೀಡುತ್ತಿರುವುದು ಮಾವುತರು ಹಾಗೂ ಕಾವಾಡಿಗರಲ್ಲಿ ಹರ್ಷ ಉಂಟುಮಾಡಿದೆ. ಬಂಡೀಪುರ ಗಡಿ ಭಾಗದಿಂದ ಮಧುಮಲೈ ಆನೆ ಶಿಬಿರಕ್ಕೆ 6 ಕಿ.ಮೀ. ಇದೆ. ಹಾಗಾಗಿ ಮೋದಿ ಅವರು ಬಂಡೀಪುರದಲ್ಲಿ ಸಾರಿ ಮುಗಿಸಿ ಮಾವುತ ದಂಪತಿಯನ್ನು ಭೇಟಿ ಆಗಲಿದ್ದಾರೆ. ನಂತರ ಅವರೊಂದಿಗೆ ಸಂವಾದ ನಡೆಸಿ, ಆಸ್ಕರ್ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆಯನ್ನೂ ತಿಳಿಸಲಿದ್ದಾರೆ.