ಮೈಸೂರು: ಅಯೋಧ್ಯೆಯ ಬಾಲರಾಮ, ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ, ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮೈಸೂರಿಗೆ ಬಂದಿದ್ದಾರೆ..
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೆ.ಟಿ.ಸ್ಟ್ರೀಟ್ನ ಕಲಾವಿದ ಮಂಜುನಾಥ್ ಎಂಬುವರ ಕಲಾಕುಂಚದಲ್ಲಿ ಮೂಡಿಬಂದಿರುವ ಗಣೇಶನ ಮೂರ್ತಿಗಳಿವು. ಪ್ರತಿ ವರ್ಷದಂತೆ ಈ ವರ್ಷವೂ ವಿಭಿನ್ನವಾಗಿ ಗಣೇಶ್ ಮೂರ್ತಿಗಳನ್ನು ಮಂಜುನಾಥ್ ಅವರು ತಯಾರಿಸಿದ್ದು, ಎಲ್ಲರ ಗಮನ ಸೆಳೆಯುತ್ತಿವೆ.
ಆಕರ್ಷಕ ಬಾಲರಾಮ: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲ ರಾಮ ಮೂರ್ತಿಯ ಶಿಲ್ಪಿಯ ತವರೂರಾದ ಮೈಸೂರಿನಲ್ಲಿ ಈಗ ಬಾಲ ರಾಮನ ಮಾದರಿಯ ಗಣಪತಿಗೆ ಎಲ್ಲಿಲ್ಲದ ಡಿಮ್ಯಾಂಡ್ ಬಂದಿದೆ. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಗರದ ಯುವಕರು ಸೇರಿದಂತೆ ನಾನಾ ಕಡೆಗಳಿಂದ ಬಾಲ ರಾಮನ ಮಾದರಿಯ ಬಾಲ ಗಣಪತಿ ಮೂರ್ತಿಗಳನ್ನು ಹೇಳಿ ಮಾಡಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿ ತಯಾರಿಸಿಕೊಂಡು ಬರುತ್ತಿರುವ ಮಂಜುನಾಥ್ ಈ ಬಾಲ ರಾಮನ ಮಾದರಿಯ ಬಾಲ ಗಣಪತಿ ಮಾಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಗೌರಿ-ಗಣೇಶ ಹಬ್ಬಕ್ಕೆ ಮೂರ ದಿನ ಬಾಕಿ ಇದ್ದು ಈಗಿನಿಂದಲೇ ಪರಿಸರ ಸ್ನೇಹಿ ಗಣಪತಿಗೆ ನಗರಿಯಲ್ಲಿ ಎಲ್ಲಿಲ್ಲದ ಬೇಡಿಕೆ ಬಂದಿದೆ. ಅದರಲ್ಲೂ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅಯೋಧ್ಯೆಯಲ್ಲಿ ಬಾಲ ರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡಿದ ನಂತರ ಬಾಲ ರಾಮನ ಮಾದರಿಯಲ್ಲಿರುವ ಬಾಲ ಗಣಪನ ಮೂರ್ತಿಗೆ ಇನ್ನಿಲ್ಲದ ಬೇಡಿಕೆ ಇದೆ. ಈ ಬೇಡಿಕೆಗಳು ಹೆಚ್ಚಾಗಿದ್ದರಿಂದ ಕಲಾವಿದ ಮಂಜುನಾಥ್ ಅವರ ಕೈಚಳಕದಿಂದ ಅರಳಿದ ಬಾಲ ಗಣಪತಿ ಮೂರ್ತಿಗಳು ಗಮನ ಸೆಳೆಯುತ್ತಿವೆ.
ಈ ಕುರಿತು ಮಾತನಾಡಿದ ಮಂಜುನಾಥ್, ಯಶ್, ಪುನೀತ್ ರಾಜಕುಮಾರ್ ಜತೆ ಗಣೇಶ ಇರುವ ಮಾದರಿಗಳನ್ನು ಕಳೆದ ಎರಡು ವರ್ಷ ಮಾಡಲಾಗಿತ್ತು. ಈ ವರ್ಷ ಬಾಲ ರಾಮನ ವಿಗ್ರಹ ಮಾದರಿಯ ಬಾಲ ಗಣಪತಿ ಮೂರ್ತಿ ಮಾಡಿಕೊಡುವಂತೆ ನಗರದ ಯುವಕರ ತಂಡವೊಂದು ಫೆÇೀಟೋ ತಂದು ಕೊಟ್ಟರು. ಕಳೆದ 10-15 ದಿನಗಳಿಂದ ಜೇಡಿ ಮಣ್ಣಿನಲ್ಲಿ ರಾಮಲಲ್ಲಾ ಮಾದರಿಯ ಹಲವು ಗಣಪತಿ ಮೂರ್ತಿಗಳನ್ನು ತಯಾರಿಸಲಾಗಿದೆ. ಇವು 3 ಅಡಿ ಎತ್ತರ ಇವೆ. ಈ ವಿಗ್ರಹ ತಯಾರಾದ ಬಳಿಕ ಬೇಡಿಕೆಗಳು ಹೆಚ್ಚಾದವು. ಆದರೆ, ಸಮಯದ ಅಭಾವದಿಂದ ಬೇಡಿಕೆಗಳಿಗೆ ತಕ್ಕಂತೆ ಪೂರ್ತಿ ಸಿದ್ಧಪಡಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಇದರ ಜತೆಗೆ ರಾಘವೇಂದ್ರ ಸ್ವಾಮಿಯ ಮಾದರಿಯ ಗಣಪ, ಹುಲಿಯ ಮೇಲೆ ಕುಳಿತಿರುವ ಮಹದೇಶ್ವರ ಗಣೇಶ ಹಾಗೂ ಕುಕ್ಕೆ ಸುಬ್ರಮಣ್ಯ ಸ್ವಾಮಿ ಮಾದರಿಯ ಗಣಪತಿ ಮಾಡಲಾಗಿದೆ. ಇದೇ ರೀತಿ ಸಾವಿರಾರು ಮಣ್ಣಿನ ಗಣಪತಿ ಮಾಡಲಾಗಿದೆ ಎಂದು ತಿಳಿಸಿದರು.