ಮೈಸೂರು:- ಯುವಕರ ಸಂಭ್ರಮ ಎಂದೇ ಹೇಳಲಾಗುವ ಯುವ ಸಂಭ್ರಮವು ದಸರಾ ಮಹೋತ್ಸವದ ಮೊದಲ ಅದ್ದೂರಿ ಕಾರ್ಯಕ್ರಮವಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಸಿ ಮಹಾದೇವಪ್ಪನವರು ಹೇಳಿದರು.
ಇಂದು ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ, ಯುವ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಯುವಸಂಭ್ರಮದಲ್ಲಿ ಭಾಗವಹಿಸಬೇಕೆಂದು ರಾಜ್ಯದ 470 ಕಾಲೇಜುಗಳಿಂದ ಯುವ ಪ್ರತಿಭೆಗಳು ಅರ್ಜಿ ಸಲ್ಲಿಸಿದ್ದು, 150 ಕಾಲೇಜುಗಳು ಆಯ್ಕೆಯಾಗಿ 120 ಕಾಲೇಜುಗಳನ್ನು ಕೈ ಬಿಡಲಾಗಿತ್ತು. ಆದರೇ ಯಾವುದೇ ಪ್ರತಿಭೆಗಳಿಗೆ ಮೋಸವಾಗಬಾರದು ಎಂಬ ಕಾರಣದಿಂದ ಯುವ ಸಂಭ್ರಮವನ್ನು ಒಂದು ದಿನ ಹೆಚ್ಚು ಮಾಡಿ ಅವರಿಗೂ ಅವಕಾಶ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಯುವಸಂಭ್ರಮದಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮಗಳು ನಡೆಯಲಿದ್ದು, ಅಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಪ್ರತಿಯೊಬ್ಬರೂ ನೋಡಬೇಕು. ಕಾರ್ಯಕ್ರಮ ನೀಡಲು ಬಂದಿರುವಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಅವರಲ್ಲಿ ಇನ್ನು ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸಬೇಕು ಎಂದು ಹೇಳಿದರು.
ಸಂಸ್ಕೃತಿಯಲ್ಲಿ ಧರ್ಮ ಒಂದು ಭಗವಾಗಿದ್ದು, ಧರ್ಮವೇ ಸಂಸ್ಕೃತಿಯಲ್ಲ. ಎಲ್ಲಾ ಯುವ ಪೀಳಿಗೆಗಳು ಇದನ್ನು ಅರಿತು ಎಲ್ಲರಿಗೂ ಸಮಾನತೆಯನ್ನು ತಂದುಕೊಟ್ಟಿರುವ ಸಂವಿಧಾನದ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಮಾನತೆ ಮತ್ತು ಬ್ರಾತೃತ್ವವನ್ನು ಬೆಳೆಸಬೇಕು ಎಂದು ಹೇಳಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಸರಾ ಮಹೋತ್ಸವದ ಮೊದಲನೇ ಕಾರ್ಯಕ್ರಮವಾದ ಯುವಸಂಭ್ರಮ ಯುವಕರಿಗೆ ರಾಸಾದೌತಣವಾಗಿದೆ. ಈ ಕಾರ್ಯಕ್ರಮವನ್ನು ವಿಜೃಂಭಣೆಯಾಗಿ ಮಾಡಲು ಸರ್ಕಾರ ಕಾರಣವಾಗಿದ್ದು, ಅತಿ ಹೆಚ್ಚು ಅನುದಾನವನ್ನು ನೀಡಿ ದಸರಾ ಆಚರಣೆಯ ಯುವಸಂಭ್ರಮದಲ್ಲಿ ಅವಿಸ್ಮರಣೀಯವಾಗಿರುವ ಕಾರ್ಯಕ್ರಮಗಳನ್ನು ನೀಡುವಂತೆ ಸೂಚನೆ ನೀಡಿದ್ದರು. ಇಂದು ಅದು ಯಾವುದೇ ವಿಜ್ಞಾವಿಲ್ಲದೆ ನೆರವೇರಿದೆ ಎಂದು ಮಾಹಿತಿ ನೀಡಿದರು.
ಎಲ್ಲಾ ಯುವಜನರಿಗಾಗಿ ಮಾಡಿರುವ ಕಾರ್ಯಕ್ರಮದಲ್ಲಿ ಕ್ವಾಲಿಟಿ ಇರುವಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದ್ದು, ಎಲ್ಲಾ ಕಾಲೇಜು ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಲಿದ್ದಾರೆ. ಸಾರ್ವಜನಿಕರ ಬೆಂಬಲದಿಂದ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಹಾಗಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಖ್ಯಾತ ಕನ್ನಡ ಚಲನಚಿತ್ರ ನಟರಾದ ಶ್ರೀ ಮುರುಳಿ ಅವರು ಮಾತನಾಡಿ, ದಸರಾ ಎಂದರೆ ಎಲ್ಲರಿಗೂ ಬಹಳ ಅಚ್ಚುಮೆಚ್ಚು. ದಸರಾ ಬಂತೆಂದರೆ ಇಲ್ಲಿನ ಜನರು ಹಾಗೂ ಮೈಸೂರಿನ ಆಡಂಬರವನ್ನು ನೋಡಲು ಎರಡು ಕಣ್ಣು ಸಾಲದು. ಇಂತಹ ಅದ್ಬುತ ದೃಶ್ಯಗಳು ಪ್ರಪಂಚದಲ್ಲಿ ಎಲ್ಲೋಯೂ ನೋಡಲು ಸಿಗುವುದಿಲ್ಲ ಎಂದರು.
ನಮ್ಮ ನಾಡಹಬ್ಬವನ್ನು ತಲಾ ತಲಾತರಗಳಿಂದ ಬೆಳೆಸಿಕೊಂಡು ಬಂದು, ಇಂದಿಗೂ ಅದೇ ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂಸದ ಸಂಗತಿ. ನಾವು ಇದರಲ್ಲಿ ಪಾಲ್ಗೊಂಡಿರುವುದು ಹೆಚ್ಚಿನ ಖುಷಿ ನೀಡಿದೆ. ಕರ್ನಾಟಕದ ಹೆಮ್ಮೆಯಾಗಿರುವ ದಸರಾವನ್ನು ಎಲ್ಲರೂ ಸಂಭ್ರಮದಿಂದ ಆಚರಿಸಿ ಯಶಸ್ವಿಗೊಳಿಸೋಣ ಎಂದರು.
ಈ ವೇದಿಕೆಯಲ್ಲಿ ಹಾಗೂ ವೇದಿಕೆಯ ಮುಂಭಾಗದಲ್ಲಿ ಬಹಳಷ್ಟು ಪ್ರತಿಭೆಗಳಿವೆ. ಎಲ್ಲರೂ ತಮ್ಮ ನೆಚ್ಚಿನ ಕ್ಷೇತ್ರದಲ್ಲಿ ಸಾಧನೆ ಮಾಡಿ, ನಮ್ಮ ಕರ್ನಾಟಕ ಭಾವುಟ ಎಲ್ಲೆಡೆ ಹಾರುವಂತೆ ಮಾಡಬೇಕು ಎಂದರು.
ಖ್ಯಾತ ಕನ್ನಡ ಚಲನಚಿತ್ರ ನಟಿಯಾದ ರುಕ್ಮಿಣಿ ವಸಂತ್ ಅವರು ಮಾತನಾಡಿ, ವಿಶ್ವ ವಿಖ್ಯಾತ ನಾಡಹಬ್ಬದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಮೈಸೂರು ಜನತೆ ಯಾವಾಗಲು ನಮ್ಮ ಮೇಲೆ ಚಿತ್ರ ರಂಗದ ಮೇಲೆ ಇಟ್ಟಿರುವ ಪ್ರೀತಿಗೆ ಎಂದಿಗೂ ಚಿರಋಣಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರ್ ನಾಥ್, ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀ ಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯಕಾರ್ಯನಿರ್ವಾಣಾಧಿಕಾರಿಗಳಾದ ಕೆ. ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ವಿಷ್ಣುವರ್ಧನ್, ಡಿ ಸಿ ಪಿ ಮುತ್ತುರಾಜ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.