ಮೈಸೂರು: ರಾಜ್ಯದ ಎಲ್ಲಾ ಜಿಲ್ಲೆಯ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನಕ್ಕಾಗಿ ಶಾಶ್ವತ ‘ಯೂನಿಟಿ ಮಾಲ್’ ನಿರ್ಮಿಸುವ ಸಂಬಂಧ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಹಾಗೂ ಸಣ್ಣ ಕೈಗಾರಿಕೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಶನಿವಾರ ದಸರಾ ವಸ್ತುಪ್ರದರ್ಶನ ಮೈದಾನದ ಎಂ.ಜಿ.ರಸ್ತೆ ದ್ವಾರದ ಬಳಿ ಸ್ಥಳ ಪರಿಶೀಲಿಸಿದರು.
ಈ ವೇಳೆ ಯೂನಿಟಿ ಮಾಲ್ ನಿರ್ಮಿಸುವ ನೀಲಿನಕ್ಷೆಯನ್ನು ವೀಕ್ಷಿಸಿದ ಸಚಿವದ್ವಯರು, ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಗುರುತಿಸಲಾಗಿರುವ ಸುಮಾರು 6.5 ಎಕರೆ ಜಾಗದಲ್ಲಿ ವ್ಯವಸ್ಥಿತವಾಗಿ ಕಟ್ಟಡ ನಿರ್ಮಿಸುವ ರೂಪುರೇಷೆಗಳನ್ನು ಕುರಿತು ಉನ್ನತ ಮಟ್ಟದ ಅಧಿಕಾರಳೊಂದಿಗೆ ಚರ್ಚಿಸಿದರು.
ರಾಜ್ಯದ ಉತ್ಪನ್ನಗಳಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿರುವ ಯೂನಿಟಿ ಮಾಲ್ ಅನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಬೇಕು. ಇದು ಪಾರಂಪರಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸ್ಥಳವಾಗಲಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಹಾಗೂ ಕರಕುಶಲ ಮಾರಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಮೈಸೂರಿಗೆ ಆಗಮಿಸುವ ದೇಶ ಹಾಗೂ ವಿದೇಶಗಳ ಪ್ರವಾಸಿಗರನ್ನು ಯೂನಿಟಿ ಮಾಲ್ ಆಕರ್ಷಿಸುವಂತಿರಬೇಕು. ಅತ್ಯುತ್ತಮವಾದ ಆಹಾರ ಮಾರಾಟ ಕೇಂದ್ರ, ಆಟದ ಸ್ಥಳಗಳು, ಮನರಂಜನಾ ಕೇಂದ್ರಗಳು, ಶಿಶುವಿಹಾರ ಒಳಗೊಂಡಿರಬೇಕು ಎಂದು ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ಸೇರಿದಂತೆ ಸಣ್ಣ ಕೈಗಾರಿಕೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.