ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಆಸ್ಪತ್ರೆಯ ನ್ಯೂರೋ ಸರ್ಜರಿ ವಿಭಾಗಕ್ಕೆ ಗುರುವಾರ ರಾತ್ರಿ ದಾಖಲಾಗಿದ್ದಾರೆ. ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಅವರು ನ್ಯೂರೋ ಸರ್ಜನ್ ಡಾ. ಅಮೋಲ್ ರಹೇಜಾ ಅವರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣಾ ಸಚಿವರ ಆರೋಗ್ಯ ಸ್ಥಿರವಾಗಿದೆ ಎಂದು ಏಮ್ಸ್ನ ಮಾಧ್ಯಮ ವಿಭಾಗದ ಉಸ್ತುವಾರಿ ಡಾ. ರೀಮಾ ದಾದಾ ತಿಳಿಸಿದ್ದಾರೆ. ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ಎಂಆರ್ಐ ಮಾಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಸ್ತುತ ಉತ್ತರ ಪ್ರದೇಶದ ರಾಜಧಾನಿ ಲಖನೌದಿಂದ ಸಂಸದರಾಗಿದ್ದಾರೆ. ಅವರು 1951 ರ ಜುಲೈ 10 ರಂದು ಉತ್ತರ ಪ್ರದೇಶದ ವಾರಾಣಸಿ ಜಿಲ್ಲೆಯ ಭಭೋರಾ ಗ್ರಾಮದಲ್ಲಿ ರಜಪೂತ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ರಾಮ್ ಬದನ್ ಸಿಂಗ್ ಮತ್ತು ತಾಯಿಯ ಹೆಸರು ಗುಜರಾತಿ ದೇವಿ. ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯ ರಾಜನಾಥ್ ಇಂದು ದೇಶದ ರಾಜಕೀಯದಲ್ಲಿ ದೊಡ್ಡ ಹೆಸರು. ಅವರು ಗೋರಖ್ಪುರ ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ.