ಮೈಸೂರು: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಹಲವು ಬಿಜೆಪಿ ನಾಯಕರು ಪಕ್ಷ ತೊರೆದು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುತ್ತಿರುವ ಮಧ್ಯೆ, ಕೇಂದ್ರದ ಮಾಜಿ ಸಚಿವ, ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ದಿಢೀರ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ತಮ್ಮ ಸಂಸದ ಸ್ಥಾನದ ಅವಧಿ ೨೦೨೪ರಲ್ಲಿ ಕೊನೆಗೊಂಡ ನಂತರ ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗಲು ನಿರ್ಧಾರಿಸಿರುವುದಾಗಿ ಶ್ರೀನಿವಾಸ್ ಪ್ರಸಾದ್ ಅವರು ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಬುಧವಾರ ಪಕ್ಷದ ಅಭ್ಯರ್ಥಿ ಸಿಎಸ್ ನಿರಂಜನ್ಕುಮಾರ್ ಪರ ಪ್ರಚಾರ ನಡೆಸಿದ ಶ್ರೀನಿವಾಸ್ ಪ್ರಸಾದ್ ಅವರು, ತಾವು ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು.
೨೦೧೩ರ ವಿಧಾನಸಭೆ ಚುನಾವಣೆ ತನ್ನ ಕೊನೆಯ ಚುನಾವಣೆ ಎಂದು ಈ ಹಿಂದೆ ಶ್ರೀನಿವಾಸ್ ಪ್ರಸಾದ್ ಅವರು ಘೋಷಿಸಿದ್ದರು. ಆದರೆ ೨೦೧೬ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು, ಕಂದಾಯ ಸಚಿವ ಸ್ಥಾನದಿಂದ ಕೈಬಿಟ್ಟಾಗ ಅವರು ಕಾಂಗ್ರೆಸ್ಗೆ ವಿದಾಯ ಹೇಳಿ ಬಿಜೆಪಿ ಸೇರಿದ್ದರು.
೨೦೧೭ರಲ್ಲಿ ನಂಜನಗೂಡು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ, ೨೦೧೯ ರಲ್ಲಿ ಚಾಮರಾಜನಗರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.