ಮಂಡ್ಯ: ರಾಜ್ಯದಲ್ಲೇ ಶ್ರೀರಂಗಪಟ್ಟಣ ಕ್ಷೇತ್ರವನ್ನು ಪ್ರಬಲ ಕ್ಷೇತ್ರವನ್ನಾಗಿ ಮಾಡಿ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡುವುದೇ ನನ್ನ ಗುರಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ 1ನೇ ವೃತ್ತದ ಜಾ.ದಳ ಕಾರ್ಯಕರ್ತರ ಸಭೆಯನ್ನುದ್ದೇಶಿಸಿಸ ಮಾತನಾಡಿದ ಅವರು, ನಾನು ಶಾಸಕನಾಗಿ ಹಣ ಮಾಡಲು ಬಂದವನಲ್ಲ. ಪ್ರಾಮಾಣಿಕವಾಗಿ ಜನಸೇವೆ ಮಾಡಲು ಬಂದವನು ಎಂದು ತಿಳಿಸಿದರು.
ನೀವು ಹೇಗೆ ತಮ್ಮ ತಮ್ಮ ಜಮೀನುಗಳಲ್ಲಿ ಹೆಚ್ಚು ಇಳುವರಿ ಕೊಡುವ ಬೆಳೆಯನ್ನು ನಾಟಿ ಮಾಡುತ್ತೀರೋ ಹಾಗೆಯೇ ಕ್ಷೇತ್ರಕ್ಕೆ ಯಾರು ಉತ್ತಮರು ಎಂಬುದನ್ನು ಯೋಚಿಸಿ ಬರುವ ಮೇ 10ರಂದು ಮತ ನೀಡಿ ಎಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಯಿಂದ ಎರಡೂ ರಾಷ್ಟ್ರೀಯ ಪಕ್ಷಗಳು ಗಾಬರಿಯಾಗಿದ್ದು, ಕಾಂಗ್ರೆಸ್ ನಾಯಕರು ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ್ ನೀಡಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಗೃಹಿಣಿಗೆ 2 ಸಾವಿರ ರೂ. ನೀಡುವುದಾಗಿ ಹೇಳುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರದಿದ್ದರೆ ರಮೇಶ್ ಬಾಬು ಅವರು ಹಣ ನೀಡಲಿದ್ದಾರೆ ಎಂದು ಪ್ರಶ್ನಿಸಿದರು.
ಪ್ರತಿಯೊಬ್ಬರಿಗೂ 5 ಲಕ್ಷ ರೂ. ವರೆಗೆ ಉಚಿತ ಆರೋಗ್ಯ, ಮನೆ ಇಲ್ಲದವರು ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ. ನೀಡುವುದಾಗಿ ಕುಮಾರಸ್ವಾಮಿ ಅವರು ತೀರ್ಮಾನಿಸಿದ್ದಾರೆ. ಹಿರಿಯರಿಗೆ ಪ್ರತಿ ತಿಂಗಳು 5 ಸಾವಿರ ಮಾಸಾಸನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಎಚ್.ಡಿ. ಕುಮಾರಸ್ವಾಮಿ ಅವರು ರೈತರು ಜೀವನಪರ್ಯಂತ ಆನಂದವಾಗಿರಬೇಕೆಂದು ಯೋಚನೆ ಮಾಡಿದರೆ, ಅದೇ ಕಾಂಗ್ರೆಸ್ನವರು 10 ಕೆ.ಜಿ. ಅಕ್ಕಿ ಮತ್ತು 2 ಸಾವಿರ ನೀಡುವುದಾಗಿ ಹೇಳುತ್ತಿದ್ದಾರೆ. ಇದನ್ನೆಲ್ಲ ನೀಡಲು ಆಗಲ್ಲ. ಬಡವರು ಮತ್ತು ಮಧ್ಯಮ ವರ್ಗದವರು ಉಳಿಯಬೇಕೆನ್ನುವುದು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಕನಸಾಗಿದೆ. ಅದಕ್ಕಾಗಿ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳವನ್ನು ಬೆಂಬಲಿಸುವ ಮೂಲಕ ಮತ್ತೊಮ್ಮೆ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಮನವಿ ಮಾಡಿದರು.
ಎಲ್ಲಿಯೂ ನಿಷ್ಠೆಯಿಂದಿಲ್ಲ:
ಹಣಕ್ಕಾಗಿ ಜಾ.ದಳ ತೊರೆದು ಕಾಂಗ್ರೆಸ್ ಸೇರಿದ ರಮೇಶ್ ಬಾಬು ಅವರು ಅಲ್ಲಿಯೂ ನಿಷ್ಠೆಯಿಂದಿಲ್ಲ. ಇಂದು ತನ್ನ ತಪ್ಪಿನ ಅರಿವಾಗಿ ಅಳುತ್ತಾ ಮತ ಕೇಳುವ ನೀವು 35 ವರ್ಷ ನಿಮ್ಮ ಕುಟುಂಬಕ್ಕೆ ಜಾ.ದಳದ ವರಿಷ್ಠ ಎಚ್.ಡಿ.ದೇವೇಗೌಡರು ಅಧಿಕಾರ ನೀಡಿದರೂ ಏನೂ ಅಭಿವೃದ್ಧಿ ಮಾಡಿಲ್ಲ. ಇಷ್ಟು ವರ್ಷ ಅಧಿಕಾರ ಅನುಭವಿಸಿರುವ ನೀವು ಅನುದಾನ ಏಕೆ ತರಲಿಲ್ಲ ಎಂದು ಪ್ರಶ್ನಿಸಿದರು.
ರಾಜಕೀಯಕ್ಕೆ ಬಂದಮೇಲೆ ಶೇ. 80ರಷ್ಟಾದರೂ ಜನಸೇವೆ ಮಾಡಬೇಕು. ಇದನ್ನು ಮಾಡದ ನೀವು ನಾನು ಮಾಡಿರುವ ಅಭಿವೃದ್ಧಿ ಕಂಡು ಒಳಸಂಚು ನಡೆಸುತ್ತಿರುವ ನಿಮಗೆ ಜನರೇ ಮುಂದೆ ಉತ್ತರ ನೀಡಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಇಂಡುವಾಳು, ಮಾಯಣ್ಣನಕೊಪ್ಪಲು, ರಾಗಿಮುದ್ದನಹಳ್ಳಿ, ಕೊತ್ತತ್ತಿ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ನೇತೃತ್ವದಲ್ಲಿ ಜಾ.ದಳ ಸೇರ್ಪಡೆಯಾದರು.
—- ಹೊನ್ನಪ್ಪ ಪುತ್ರ ಜಾ.ದಳ ಸೇರ್ಪಡೆ —-
ವಿಧಾನ ಪರಿಷತ್ ಮಾಜಿ ಸದಸ್ಯ ದಿ. ಎಚ್.ಹೊನ್ನಪ್ಪ ಅವರ ಪುತ್ರ ಡಾ. ಆದರ್ಶಗೌಡ ಅವರು ರವೀಂದ್ರ ಶ್ರೀಕಂಠಯ್ಯ ಅವರ ಕಾರ್ಯವೈಖರಿಯನ್ನು ಮೆಚ್ಚಿ ಜಾತ್ಯತೀತ ಜನತಾದಳ ಸೇರ್ಪಡೆಯಾದರು.
ಈ ಸಂದರ್ಭ ಮಾತನಾಡಿದ ಅವರು, ನಾನು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗಿ ಜಾ.ದಳ ಸೇರ್ಪಡೆಯಾಗಿಲ್ಲ. ನಮ್ಮ ನೆರೆಯ ರಾಜ್ಯಗಳಂತೆ ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಇರಬೇಕು ಎನ್ನುವುದು ನನ್ನ ಬಯಕೆ. ಪ್ರಾದೇಶಿಕ ಪಕ್ಷ ಆಡಳಿತದಲ್ಲಿದ್ದರೆ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದರು.
ಮುಂದೆ ನಾವೆಲ್ಲರೂ ಸೇರಿ ಪ್ರಾದೇಶಿಕ ಪಕ್ಷವಾಗಿರುವ ಜಾತ್ಯತೀತ ಜನತಾದಳವನ್ನು ಅಧಿಕಾರಕ್ಕೆ ತಂದು ಇಳಿವಯಸ್ಸಿನಲ್ಲೂ ಹೋರಾಟ ನಡೆಸುತ್ತಿರುವ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಕೈ ಬಲಪಡಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.