ಮೈಸೂರು: ಕೇಂದ್ರ ಬಜೆಟ್ನಲ್ಲಿ ಎಲ್ಲ ರಾಜ್ಯಗಳಿಗೂ ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ಮೈಸೂರು ಜಿಲ್ಲಾಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕೇಂದ್ರ ಬಜೆಟ್ ನಲ್ಲಿ ಆಂಧ್ರ ಮತ್ತು ಬಿಹಾರದ ಹೆಸರು ಹೇಳಿದ್ದಾರೆ. ಅದನ್ನೇ ನೆಪ ಮಾಡಿಕೊಂಡು ತಾರತಮ್ಯ ಅಂತ ಎಂದು ಇಂಡಿ ಒಕ್ಕೂಟದ ಸದಸ್ಯ ಪಕ್ಷಗಳು ಆರೋಪ ಮಾಡಿವೆ ಎಂದವರು ತಿಳಿಸಿದರು.ನಾನು ಸಿಎಂ ಆಗಿದ್ದಾಗ ಬಜೆಟ್ ಮಂಡಿಸಿದ್ದೆ. ಅದನ್ನು ಕಾಂಗ್ರೆಸ್ ಮಂಡ್ಯ ಬಜೆಟ್ ಅಂತ ಆರೋಪಿಸಿತ್ತು. ಈಗ ಕೇಂದ್ರ ಬಜೆಟ್ನಲ್ಲಿ ಆಂಧ್ರಕ್ಕೆ ಪೋಲಾವರಮ್ ಅಣೆಕಟ್ಟು ಯೋಜನೆ ಇದೆ. ಅದು ಚಂದ್ರಬಾಬು ನಾಯ್ಡು ಸಿಎಂ ಆಗಿದ್ದಾಗ ರೂಪುಗೊಂಡು ಯೋಜನೆ. ನೇಪಾಳದಲ್ಲಿ ಮಳೆಯಾದಾಗ ಬಿಹಾರದಲ್ಲಿ ಪ್ರವಾಹ ಬರುತ್ತೆ.ಹೀಗಾಗಿ ವಿಶೇಷ ಪ್ಯಾಕೇಜ್ ನೀಡಲಾಗಿದೆ ಎಂದು ಹೆಚ್ ಡಿಕೆ ವಿವರಿಸಿದರು. ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆದಿದೆ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ಕೇಂದ್ರ ಸಚಿವ ಹೆಚ್ ಡಿ ಕೆ ತಿರುಗೇಟು ನೀಡಿ ನಾನು ಈ ಹಿಂದೆ ಸಿಎಂ ಆಗಿ, ಇದೀಗ ಕೇಂದ್ರ ಸಚಿವನಾಗಿ ಸ್ವಲ್ಪ ಅನುಭವ ಪಡೆದಿದ್ದೇನೆ. ನಾನು ಸಿಎಂ ಆಗಿದ್ದಾಗ ಕೊಡಗಿನಲ್ಲಿ ಭೀಕರ ಪ್ರವಾಹ ಬಂತು. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿತು. ಸ್ವತಃ ಪ್ರಧಾನಿಯವರೇ ಕರೆ ಮಾಡಿ ಮಾಹಿತಿ ಪಡೆದು ಕೊಂಡರು. ಎಲ್ಲಾ ರೀತಿಯ ನೆರವು ನೀಡುವ ಭರವಸೆ ನೀಡಿದರು. ಅಂತಹ ವಾತಾವರಣ ವನ್ನು ನೀವೇಕೆ ಸೃಷ್ಟಿಸಿಕೊಂಡಿಲ್ಲವೆಂದು ಹೆಚ್ ಡಿಕೆ ಪ್ರಶ್ನಿಸಿದರು. ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ಏಕೆ ದೂರುತ್ತೀರಿ? ಎಂದ ಕುಮಾರಸ್ವಾಮಿ, ರಾಜ್ಯದ ಸಂಸದರ ಮೇಲೆ ಏಕೆ ಆರೋಪಗಳನ್ನು ಮಾಡುತ್ತೀರಿ?. ಹಾಗಾದರೆ ರಾಜ್ಯ ಸರ್ಕಾರದ ಕೆಲಸವಾದರೂ ಏನು? ಎಂದರು.ನೀವು ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಕೇಂದ್ರದ ಮುಂದೆ ಸಮರ್ಥವಾಗಿ ಇಡಬೇಕು.ಅದು ಬಿಟ್ಟು ಎಲ್ಲದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡೋದು ಸರಿಯಲ್ಲ. ಎಂದು ಅವರು ಹೇಳಿದರು.ಇ.ಡಿ. ವಿರುದ್ಧ ಎಫ್ಐಆರ್ ದಾಖಲು ಕುರಿತು ಮಾತನಾಡಿದ ಕುಮಾರಸ್ವಾಮಿ, ವಾಲ್ಮೀಕಿ ನಿಗಮದ ವಿಚಾರವಾಗಿ ಆ ಕಲ್ಲೇಶ ಅನ್ನುವವನ ಕೈಯಲ್ಲಿ ಕಂಪ್ಲೆಂಟ್ ಕೊಡಿಸಿದ್ದೀರಿ.ಆತನ ಹಿನ್ನೆಲೆ ಏನು ? ಸಿದ್ದರಾಮಯ್ಯ ಅವರೇ ನೀವೇ ಕಲ್ಲೇಶ್ನನ್ನು ಜೂನ್ ತಿಂಗಳಲ್ಲಿ ಸಸ್ಪೆಂಡ್ ಮಾಡಿದ್ದೀರಿ. ಇನ್ನೂ ಒಂದು ತಿಂಗಳೂ ಆಗಿಲ್ಲ. ಕೇಂದ್ರ ಸರ್ಕಾರದ 40 ಕೋಟಿ ರೂ. ಅನುದಾನ ಬಳಕೆ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಅಂಥವನಿಂದ ಕಂಪ್ಲೆಂಟ್ ಕೊಡಿಸಿದ್ದೀರಿ. ಕಂಪ್ಲೆಂಟ್ ಕೊಡೋಕೆ ಬೇರೆ ಯಾರೂ ಸಿಗಲಿಲ್ವ ? ನಿಮ್ಮ ಪೊನ್ನಣ್ಣ ಸರಿಯಾಗಿ ಹೇಳಿಕೊಡಲಿಲ್ವ ? ಇಂಥ ಸಲಹೆ ಕೊಡುವವನಿಗೆ ಎಸ್ಕಾರ್ಟ್ ಬೇರೆ ಕೊಡ್ತೀರಿ.ಇದೆಯೇ ನಿಮ್ಮ ಆಡಳಿತ ವೈಖರಿ ? ಎಂದು ಲೇವಡಿ ಮಾಡಿದರು.