ರಾಮನಗರ: ಇಲ್ಲಿನ ರೈಲು ನಿಲ್ದಾಣದಲ್ಲಿ ಭಾನುವಾರ ರಾತ್ರಿ ಚಲಿಸುತ್ತಿದ್ದ ರೈಲೊಂದರ ಬೋಗಿಗಳು ಬರ್ಪಟಿದ್ದು, ಪ್ರಯಾಣಿಕರು ಆತಂಕಕ್ಕೆ ಒಳಗಾದರು.
ಮೈಸೂರಿನಿಂದ ಬೆಂಗಳೂರು ಕಡೆಗೆ ಹೊರಟಿದ್ದ ತೂತುಕುಡಿ ಎಕ್ಸ್ಪ್ರೆಸ್ ರಾತ್ರಿ 8ರ ವೇಳೆಗೆ ರಾಮನಗರ ನಿಲ್ದಾಣ ತಲುಪಿದ್ದು, ಅಲ್ಲಿಂದ ಮತ್ತೆ ಪ್ರಯಾಣ ಮುಂದುವರಿಸುತ್ತಲೇ ಶಬ್ದ ಕಾಣಿಸಿಕೊಂಡಿತು. ನೋಡುನೋಡುತ್ತಲೇ ರೈಲಿನ ಮಧ್ಯಭಾಗದ ಬೋಗಿಗಳು ಬರ್ಪಟ್ಟವು. ಇದರಿಂದ ರೈಲಿನಲ್ಲಿ ಇದ್ದ ಪ್ರಯಾಣಿಕರು ಬೆಚ್ಚಿ ಬಿದ್ದರು. ನಂತರದಲ್ಲಿ ರೈಲು ಅಲ್ಲಿಯೇ ನಿಂತಿತು. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ.
‘ ರೈಲು ರಾಮನಗರ ನಿಲ್ದಾಣ ಬಿಟ್ಟು ಹೊರಟಿತ್ತು. ಆ ವೇಳೆ ಏಕಾಏಕಿ ಶಬ್ದ ಬಂತು. ನೋಡಿದರೆ ನಾವಿದ್ದ ಬೋಗಿಯು ಮುಂದೆ ಇದ್ದ ಬೋಗಿಯಿಂದ ಬರ್ಪಟ್ಟಿದ್ದು, ಹಳಿ ಮೇಲೆ ಹಾಗೆಯೇ ನಿಂತುಕೊಂಡಿತ್ತು. ಇದರಿಂದ ಗಾಬರಿಗೊಂಡೆವು. ಆದಾಗ್ಯೂ ರೈಲ್ವೆ ಸಿಬ್ಬಂದಿ ನೆರವಿಗೆ ಬರಲಿಲ್ಲ’ ಎಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಜಿತ್ ಎಂಬುವರು ಮಾಹಿತಿ ನೀಡಿದರು.
ಘಟನೆ ಬಳಿಕ ತೂತುಕ್ಕುಡಿ ಎಕ್ಸ್ಪ್ರೆಸ್ ರಾಮನಗರ ನಿಲ್ದಾಣದಲ್ಲೇ ನಿಂತಿದ್ದು, ಹಳಿಗಳ ಜೋಡಣೆ ಕರ್ಯಕ್ಕೆ ಸಿದ್ಧತೆ ನಡೆದಿತ್ತು. ಮತ್ತೊಂದು ಹಳಿಯಲ್ಲಿ ಬೆಂಗಳೂರು–ಮೈಸೂರು ನಡುವಿನ ರೈಲುಗಳು ಸಂಚಾರ ಮುಂದುವರಿಸಿದವು.
ಭಾನುವಾರವಾದ್ದರಿಂದ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ತೂತುಕ್ಕುಡಿ ರೈಲಿನಲ್ಲಿದ್ದವರು ಬೆಂಗಳೂರಿಗೆ ಪ್ರಯಾಣ ಮುಂದುವರಿಸಲು ಪರದಾಡಿದರು. ಮುಂಗಡ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರು ನಿಲ್ದಾಣದಲ್ಲೇ ನಿಂತಿದ್ದು, ರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ನಿಲ್ದಾಣದ ಅಧಿಕಾರಿಗಳನ್ನು ಒತ್ತಾಯಿಸಿದರು.