ಧರ್ಮಸ್ಥಳ : ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಸ್ಕೀಮ್ ಶಕ್ತಿ ಯೋಜನೆಗೆ ಮಹಿಳಾ ಮಣಿಗಳಿಂದ ಶಕ್ತಿ ತುಂಬುವ ಕಾರ್ಯ ಭರದಿಂದ ಸಾಗಿರುವ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ವೀಕೆಂಡ್ ಭಾರೀ ಜನಸ್ತೋಮ ಸೇರಿದೆ.
ಉತ್ತರ ಕರ್ನಾಟಕ ಭಾಗದಿಂದ ಭಾರೀ ಸಂಖ್ಯೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಾಪಸ್ ಊರಿಗೆ ಮರಳುತ್ತಿರುವ ಭಕ್ತ ಸಮೂಹದಿಂದ ಬಸ್ ನಿಲ್ದಾಣದಲ್ಲಿ ತುಂಬಿ ತುಳುಕುತ್ತಿದೆ. ರಶ್ನಿಂದ ಬಸ್ ಹತ್ತಿ ಇಳಿಯಲು ಪ್ರಯಾಣಿಕರು ಹರಸಾಹಸ ಪಡುತ್ತಿರುವ ದೃಶ್ಯ ಕಂಡು ಬರುತ್ತಿದೆ.
ವಾರಾಂತ್ಯವಾದ್ದರಿಂದ ಶನಿವಾರವೇ ಬಂದು ವಾಸ್ತವ್ಯ ಹೂಡಿದ್ದು ಆದಿತ್ಯವಾರ ಮತ್ತೆ ಊರಿಗೆ ವಾಪಸ್ ಆಗುವ ಭಕ್ತರ ಸಂಖ್ಯೆ ಹೆಚ್ಚಿದೆ. ಪರಿಣಾಮ ಬೆಳಗ್ಗೆಯೇ ಧರ್ಮಸ್ಥಳದ ಬಸ್ ನಿಲ್ದಾಣದಲ್ಲಿ ಫುಲ್ ರಶ್ ರಶ್ ಕಂಡು ಬರುತ್ತಿದೆ. ಕಿಲೋ ಮೀಟರ್ ಗಟ್ಟಲೆ ನಿಂತುಕೊಂಡೇ ಪ್ರಯಾಣಿಸಬೇಕಾದ ಅನಿವಾರ್ಯತೆ ತಪ್ಪಿಸಲು ಕೆಲವರು ಬಸ್ ಕಿಟಕಿಯಿಂದಲೇ ತಮ್ಮ ಸಾಮಾನು – ಸರಂಜಾಮುಗಳನ್ನು ಸೀಟ್ ಮೇಲೆ ಮೊದಲೇ ಇಟ್ಟು ಸೀಟು ಕಾಯ್ದಿರಿಸುವ ದೃಶ್ಯವೂ ಕಂಡು ಬರುತ್ತಿದೆ. ಅಲ್ಲದೆ ಬಸ್ ಹತ್ತಲು, ಸೀಟ್ ಗಾಗಿ ಪ್ರಯಾಣಿಕರು ಮುಗಿಬೀಳುತ್ತಿರುವುದು ಕಂಡು ಬರುತ್ತಿದೆ.