ವಸಂತ ಬಂದ ಋತುಗಳ ರಾಜ ತಾಬಂದ |
ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ |
ಚಳಿಯನು ಕೊಂದ, ಹಕ್ಕಿಗಳುಲಿಯಗಳೆ ಚೆಂದ | ಎಂಬ ಬಿ.ಎಂ.ಶ್ರೀ ಯವರ ಚೆಂದದ ಹಾಡಿನ ಸಾಲುಗಳು ಪ್ರಕೃತಿಯಲ್ಲಿ ನ ಪರಿವರ್ತನೆಯನ್ನು ಬಲು ಸೊಗಸಾಗಿ ಮೂಡಿಸಿದೆ. ವಸಂತ ಋತುವಿನ ಆಗಮನ ಕಾಲದಲ್ಲಿ ಅಖಿಲಾಂಡ ಕೋಟಿ ಬ್ರಹ್ಮಾಂಡದ ಸಕಲ ಜೀವರಾಶಿಗಳಲ್ಲಿ ಚೈತನ್ಯದ ಚಿಲುಮೆ ಉಕ್ಕಿ ಹರಿಯುತ್ತಿದೆ. ನಿಸರ್ಗ ಮಾತೆಯ ಮಡಿಲಲ್ಲಿ ಎಲ್ಲಿ ನೋಡಿದರಲ್ಲಿ ಹೊಸ ಚಿಗುರು ಮೂಡಿ ಹಚ್ಚನೆ ಹಸಿರ ಸೊಬಗು ನೋಡುಗರ ಕಣ್ಮನ ಸೆಳೆಯುತ್ತಿದೆ. ಜಗದ ಜನರ ಮನಗಳಲ್ಲಿ , ಮಾವು ಬೇವು ಬನಗಳಲ್ಲಿ ನವೋಲ್ಲಾಸವು ತುಂಬಿದೆ. ಹೊಸ ವರುಷವು ಹೊಸ ಹರುಷವ ಚಿಮ್ಮಿ ಚಿಮ್ಮಿ ತರುತ್ತಿದೆ. ಜೇಂದುಂಬಿಗಳ ಸಂಗೀತ ಗಾನ ನಾದ ತರಂಗಗಳಾಗಿ ಹೊಮ್ಮುತ್ತಿವೆ. ನದಿಗಳಲ್ಲಿ ಜುಳುಜುಳು ಮಂಜುಳಗಾನ ಕೇಳುವ ಕಿವಿಗಳಿಗೆ ಇಂಪಾಗಿವೆ. ನದಿ ತಟಗಳಿಂದ ಬೀಸುವ ತಂಗಾಳಿ ನವ ಚೈತನ್ಯವನ್ನುಂಟು ಮಾಡಿದೆ. ಎಲ್ಲೆಡೆಯೂ ಹೊಸತನ ಕಳೆಗೆಟ್ಟುತ್ತಿದೆ. ಇದಕ್ಕೆಲ್ಲಾ ಕಾರಣ ಹೊಸ ವರ್ಷದಲ್ಲಿ ಹೊಸ ಹರ್ಷವನ್ನು ತಂದಿರುವ ಇಂದಿನ ಯುಗಾದಿ ಹಬ್ಬ. ಕನ್ನಡ ಸಾಹಿತ್ಯ ಲೋಕದ ವರಕವಿ ಬೇಂದ್ರೆಯವರು ಹೇಳಿರುವಂತೆ : ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ಎಂಬ ಪ್ರಸಿದ್ಧ ಹಾಡಿನ ನಿನಾದ ಮತ್ತೆ ಮತ್ತೆ ಹೊಸದಾದ ಚೈತನ್ಯವನ್ನು ನೀಡುತ್ತದೆ.
ಆತ್ಮೀಯ ಓದುಗ ಭಾಂದವರೇ,
ಯುಗಾದಿ ಹಿಂದೂಗಳ ಸರ್ವಶ್ರೇಷ್ಠ ಹಾಗೂ ಪವಿತ್ರ ಹಬ್ಬವಾಗಿದೆ. ಯುಗಾದಿ ಹಬ್ಬದಲ್ಲಿ ಪ್ರಕೃತಿಯು ನವ ವಸಂತಕ್ಕೆ ಹೊಸ ಚಿಗುರಿನೊಂದಿಗೆ, ಹೊಸ ಹಸಿರಿನೊಂದಿಗೆ ಕಾಲಿಡುತ್ತದೆ. ಹೊಸತನ ಎಲ್ಲೆಲ್ಲೂ ಕಂಡುಬರುತ್ತದೆ. ಪ್ರಾಣಿ ಪಕ್ಷಿಗಳ ಬದುಕಿನಲ್ಲೂ ಗಮನಾರ್ಹ ಬದಲಾವಣೆ. ಪರಿವರ್ತನೆ ಹೊಸತನಕ್ಕೆ ನಾಂದಿ ಹಾಡುತ್ತದೆ. ಹಬ್ಬಕ್ಕೆ ಮುಂಚಿತವಾಗಿಯೇ ಮನೆಗಳನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಲಾಗುತ್ತದೆ. ಹಬ್ಬದ ದಿನ ಮನೆ ಮಂದಿಯೆಲ್ಲಾ ಮುಂಜಾನೆಯ ಸೂರ್ಯೋದಯಕ್ಕಿಂತ ಮೊದಲೇ ಎದ್ದು ಅಭ್ಯಂಜನ ಸ್ನಾನ ಮಾಡುತ್ತಾರೆ. ಮನೆಯ ಅಂಗಳಕ್ಕೆ ಬಣ್ಣ ಬಣ್ಣದ ರಂಗವಲ್ಲಿಯನ್ನಿಟ್ಟು ಅಲಂಕರಿಸುತ್ತಾರೆ. ಮನೆಯ ಬಾಗಿಲಿಗೆ ತಳಿರು ತೋರಣಗಳಿಂದ, ವಿವಿಧ ಹೂಗಳಿಂದ ಸಿಂಗರಿಸುತ್ತಾರೆ. ಹೊಸ ಬಟ್ಟೆಗಳನ್ನು ತೊಟ್ಟಾಗ ಮನಸ್ಸಿಗೆ ಸಿಗುವ ಆನಂದವೇ ಪರಮಾನಂದ. ದೇವರನ್ನು ಭಕ್ತಿ ಭಾವದಿಂದ ಆರಾಧಿಸುತ್ತಾರೆ. ಬಗೆ ಬಗೆಯ ಸಿಹಿ ತಿನಿಸುಗಳನ್ನು ತಯಾರಿಸಿ ಸವಿಯುತ್ತಾರೆ. ಈ ಹಬ್ಬದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಯುಗಾದಿ ಎಂಬ ಶಬ್ದವು ಸಂಸ್ಕೃತ ಪದವಾಗಿದೆ. ಮುಖ್ಯವಾಗಿ, “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” ಎಂಬ ಎರಡು ಶ್ರೇಷ್ಠ ಪದಗಳ ಸಂಯೋಜನೆಯಾಗಿದೆ: ಯುಗ, ಅಂದರೆ ಹೊಸ ಎಂಬ ಅರ್ಥವನ್ನು ಮತ್ತು ಆದಿ, ಅಂದರೆ ಶುಭ ಆರಂಭ ಎಂಬ ಅರ್ಥವನ್ನು ಹೊಂದಿದೆ. ಆದ್ದರಿಂದ, ಯುಗಾದಿ ಎಂದರೆ ಹೊಸ ಆರಂಭ, ಹೊಸ ಉಗಮ , ಹೊಸಹುಟ್ಟು ಎಂಬ ಅರ್ಥದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಯುಗಾದಿ ಅಥವಾ ಉಗಾದಿ ಹಬ್ಬವು ಚೈತ್ರ ಮಾಸದ ಮೊದಲ ದಿನವಾಗಿದ್ದು ಭಾರತದ ಅನೇಕ ಕಡೆಗಳಲ್ಲಿ ಆಚರಿಸುತ್ತಾರೆ. ಈ ದಿನ ಹೊಸ ವರ್ಷದ ಮೊದಲ ದಿನವೆಂದು ಮತ್ತು ಹೊಸ ವರ್ಷದ ಮೊದಲ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಆಚರಿಸುವ ಜನರು ಸೃಷ್ಟಿಕರ್ತ ಬ್ರಹ್ಮದೇವನ ಆಶೀರ್ವಾದವನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ. ಏಕೆಂದರೆ ಹಿಂದೂಧರ್ಮದಲ್ಲಿ ಪುರಾಣಗಳಿಗೆ ವಿಶೇಷ ಮನ್ನಣೆ ಇದೆ. ಪುರಾಣಗಳ ಪ್ರಕಾರ, ಈ ದಿನವೇ ಬ್ರಹ್ಮದೇವರು ಬ್ರಹ್ಮಾಂಡವನ್ನು ವಿಶೇಷವಾಗಿ ಈ ಭೂಮಿಯನ್ನು ಸೃಷ್ಟಿಸಿದನು. ನಂತರ ಬ್ರಹ್ಮದೇವನು ದಿನಗಳು, ತಿಥಿಗಳು, ವಾರಗಳು, ತಿಂಗಳುಗಳು ಮತ್ತು ವರ್ಷಗಳನ್ನೊಳಗೊಂಡ ಪಂಚಾಂಗವನ್ನು ರಚಿಸಿದನು ಮತ್ತು ಸರ್ವವನ್ನೂ ಹರಸಿದನು ಆದ್ದರಿಂದ, ಯುಗಾದಿಯನ್ನು ಬ್ರಹ್ಮಾಂಡದ ಸೃಷ್ಟಿಯ ಮೊದಲ ದಿನ ಎನ್ನುವ ನಂಬಿಕೆಯಿದೆ. ಭಗವಾನ್ ಶ್ರೀ ಮಹಾವಿಷ್ಣುವಿನ ಅನೇಕ ಹೆಸರುಗಳಲ್ಲಿ ಯುಗಾದಿಯೂ ಒಂದು ಎಂದು ಹೇಳಲಾಗುತ್ತದೆ. ಯುಗಾದಿಕೃತ್ ಅಂದರೆ ಯುಗಗಳನ್ನು ಸೃಷ್ಟಿಸುವವನನ್ನು ಸೂಚಿಸುವ ಅವನ ಇನ್ನೊಂದು ಹೆಸರು. ಆದ್ದರಿಂದ, ವಿಷ್ಣುವನ್ನು ಮತ್ತು “ಸಮಯ” ವನ್ನು ಸೃಷ್ಟಿಸಿದ ಪರಬ್ರಹ್ಮನನ್ನು ಪೂಜಿಸಲು ಇದು ಪರಿಪೂರ್ಣ ದಿನವಾಗಿದೆ. ಇತಿಹಾಸ ಸಾಕ್ಷ್ಯಾಧಾರವನ್ನು ನೋಡುವುದಾದರೆ 12 ನೇ ಶತಮಾನದಲ್ಲಿ ಪ್ರಸಿದ್ಧ ಭಾರತೀಯ ಗಣಿತಜ್ಞ ಭಾಸ್ಕರಾಚಾರ್ಯರ ಖಗೋಳ ಲೆಕ್ಕಾಚಾರವು ಸೂರ್ಯೋದಯದಿಂದ ಯುಗಾದಿಯ ದಿನವನ್ನು ಹೊಸ ವರ್ಷದ ಆರಂಭ, ಹೊಸ ತಿಂಗಳು ಮತ್ತು ಹೊಸ ದಿನವೆಂದು ನಿರ್ಧರಿಸಿದ್ದಾರೆ. ಈ ಹಬ್ಬವನ್ನು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಚಾಂದ್ರಮಾನ ಯುಗಾದಿಯೆಂದು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ “ಬೇವು-ಬೆಲ್ಲ.”
ಜೀವನದ ಸಿಹಿ-ಕಹಿಗಳೆರಡನ್ನೂ ಸರಿ ಸಮಾನವಾಗಿ ಪಡೆಯಬೇಕೆಂದು, ಸ್ಥಿತಪ್ರಜ್ಞತೆ ಯನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಒಬ್ಬಟ್ಟು ಅಥವಾ ಹೋಳಿಗೆ ಈ ಹಬ್ಬದ ವಿಶೇಷ ತಿನಿಸು ಆಗಿರುತ್ತದೆ. ಈ ಹಬ್ಬದ ದಿನದಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿರುತ್ತದೆ. ಈ ಹಬ್ಬದಲ್ಲಿ ಚಂದ್ರನನ್ನು ನೋಡಿ, ಪೂಜಿಸಿ ನಂತರ ಕಿರಿಯರು ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆಯುತ್ತಾರೆ. ಹಾಗೂ ಒಬ್ಬರಿಗೊಬ್ಬರು ಬೇವು-ಬೆಲ್ಲವನ್ನು ಹಂಚಿಕೊಂಡು ತಿನ್ನುತ್ತಾರೆ. ದ್ವೇಷ, ಸಿಟ್ಟು, ಅಸೂಯೆ, ಮದ, ಮಾತ್ಸರ್ಯಗಳು ದೂರವಾಗಿ ಸ್ನೇಹ, ವಿಶ್ವಾಸ, ಪರಸ್ಪರ ನಂಬಿಕೆ, ಸಂಬಂಧಗಳು ಚಿರಕಾಲ ಉಳಿಯಲಿ, ಹೊಸ ಬಾಳು ಬೆಳಗಲಿ, ಸಿರಿಸಂಪದವು ಬೆಳೆಯಲಿ ಎಂಬುದೇ ಇದರ ಅಂತರಾರ್ಥವಾಗಿದೆ. ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಕುಗ್ಗದೆ ಜಗ್ಗದೆ ಬದುಕನ್ನು ಮುನ್ನಡೆಸೋಣ. ಯುಗಾದಿ ಎಂದರೆ ಹೊಸ ಯುಗದ ಆರಂಭ. ಹೊಸ ಭರವಸೆಯೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸೋಣ. ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ ನಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ. ಭರವಸೆಯ ಹೊಸ ಬೆಳಕು ಎನ್ನಿಸಿದ ಯುಗಾದಿಯ ಹೊಸ ವರ್ಷವು ಸಂತೋಷ, ಹೊಸ ಅವಕಾಶಗಳು ಮತ್ತು ಹೊಸ ಪ್ರಯತ್ನಗಳನ್ನು ತರಲಿ ಎಂಬುದೇ ಸರ್ವರ ಆಶಯವಾಗಿದೆ. ಯುಗಾದಿ ಹಬ್ಬದ ಮಾರನೆಯ ದಿನ ಹೊಸತೊಡುಕು ಅಥವಾ ವರುಷತೊಡುಕು ಎಂದು ಆಚರಿಸಲಾಗುತ್ತದೆ. ಅವರವರ ಇಷ್ಟದ ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಇಂತಹ ಯುಗಾದಿ ಹಬ್ಬದಲ್ಲಿ ಪ್ರಕೃತಿಯು ಪರಿವರ್ತನೆಗೆ ಹೊಂದಿಕೊಳ್ಳುವಂತೆ ನಮ್ಮ ಮನಸ್ಸುಗಳು ಪರಿವರ್ತನೆಯನ್ನು ಸ್ವೀಕರಿಸಿ ಸಮಾಜಮುಖಿಯಾಗಿ ಚಿಂತಿಸಿ ರಾಷ್ಟ್ರದೇಳ್ಗೆಗೆ, ವಿಶ್ವದೇಳ್ಗೆಗೆ ಪಣತೊಟ್ಟು ಶ್ರಮಿಸುವಂತಾಗಬೇಕು. ಈ ನಿಟ್ಟಿನಲ್ಲಿ ಭಾರತೀಯ ಭಾವ ” ಬದುಕು ಮತ್ತು ಬದುಕಲು ಬಿಡು ” ಎಂಬುದನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ, ಸರ್ವೇ ಜನಾಃ ಸುಖಿನೋ ಭವಂತು ಎನ್ನುತ್ತಾ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.