ಮೈಸೂರು: ಹುಣಸೂರು ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೈಸೂರು-ಮಾನಂದವಾಡಿ ರಸ್ತೆಯ ಡಿಬಿ ಕುಪ್ಪೆ ಗ್ರಾಮದ ಕೃಷಿ ಭೂಮಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 30 ವರ್ಷದ ಗಂಡಾನೆ ಸಾವಿಗೀಡಾಗಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಮೈಸೂರು-ಮಾನಂದವಾಡಿ ರಸ್ತೆಯ ಡಿಬಿ ಕುಪ್ಪೆ ಗ್ರಾಮದ ಕೃಷಿ ಜಮೀನಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 30 ವರ್ಷದ ಗಂಡಾನೆನೆ ಸಾವಿಗೀಡಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ ಚಿಕ್ಕನರಗುಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸೆಸ್ಕ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಪಶುವೈದ್ಯರ ಪ್ರಕಾರ, ಆನೆಯು ಸುಮಾರು 30 ರಿಂದ 35 ವರ್ಷ ಪ್ರಾಯದ್ದಾಗಿದ್ದು, ಡಿಬಿ ಕುಪ್ಪೆ ಗ್ರಾಮದ ಉದಯ್ ಅಲಿಯಾಸ್ ಥಾಮಸ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿದೆ. ನಿಯಮ ಉಲ್ಲಂಘಿಸಿ ತಮ್ಮ ಮನೆಯಿಂದ ಸೋಲಾರ್ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸರಬರಾಜು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿ ಥಾಮಸ್ ತಲೆಮರೆಸಿಕೊಂಡಿದ್ದಾರೆ. ಅರಣ್ಯ ಹಕ್ಕು ಕಾಯಿದೆ ಉಲ್ಲಂಘನೆಯಡಿ ಅಂತರಸAತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಕ್ರಮ ವಿದ್ಯುತ್ ಸರಬರಾಜಿನ ಬಗ್ಗೆ ತನಿಖೆ ನಡೆಸಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.