ಮೈಸೂರು,ಏ.25:- ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಮೈಸೂರಿನ ವಿವಿಧೆಡೆ ಪ್ರಚಾರ ಕಾರ್ಯಕ್ರಮಕ್ರಮ ಹಮ್ಮಿಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಇಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನನಗೆ ವೈದ್ಯರು ಇನ್ನೂ ಎರಡು ಮೂರು ದಿನ ಯಾವುದೇ ಪ್ರೋಗ್ರಾಂ ಹಾಕಬಾರದು ವಿಶ್ರಾಂತಿ ತೆಗೆದುಕೊಳ್ಳಬೇಕು ಅಂತ ಸಲಹೆ ನೀಡಿದ್ದಾರೆ. ಆದರೆ ನಾನು ವಿಶ್ರಾಂತಿ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಇಂದು ಕೆ.ಆರ್.ಕ್ಷೇತ್ರ, ಚಾಮರಾಜ ಕ್ಷೇತ್ರ ಮತ್ತು ವರುಣಾ ಕ್ಷೇತ್ರಗಳ ಸಭೆ ಕರೆದಿದ್ದೇನೆ. ಅಲ್ಲಿಯ ಪ್ರಚಾರ ಸಭೆಗೆ ಕಾರ್ಯಕ್ರಮ ನಿಗದಿ ಮಾಡಿದ್ದೇನೆ. ಇವತ್ತಿನಿಂದ ಪುನಃ ನಾನು ಮುಂದಿನ 8ನೇ ತಾರೀಖಿನವರೆಗೂ ನಿರಂತರವಾಗಿ ಕಾರ್ಯಕ್ರಮಗಳಿಗೆ ಚಾಲನೆ ಕೊಡುತ್ತೇನೆ ಎಂದರು.
ದೇವೇಗೌಡರು ಸಹ ಪ್ರಚಾರಕ್ಕೆ ಇಳಿದಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ನನ್ನ ದೇಹದ ಮೇಲಾದ ಶ್ರಮ ಅವರಿಗೆ ಆತಂಕವನ್ನು ಮೂಡಿಸಿದೆ. ಅವರು ನಿನ್ನೆಯಿಂದ ಉರಿಬಿಸಿಲಿನಲ್ಲಿ ಶಿರಾ, ಮಧುಗಿರಿ, ಕೊರಟಗೆರೆಯಲ್ಲಿ ಬೃಹತ್ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಇಂದು ಪಿರಿಯಾಪಟ್ಟಣ .ಕೆ.ಆರ್.ನಗರಕ್ಕೆ ಹೊರಟಿದ್ದಾರೆ. ಅವರೂ ಸಹ ಸುಮಾರು 50-60 ಕ್ಷೇತ್ರಗಳಲ್ಲಿ ಭೇಟಿ ನೀಡಬೇಕು ಎಂದು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದಾರೆ. ಅವರ ಇಳಿವಯಸ್ಸಿನಲ್ಲಿ, ಆರೋಗ್ಯ ಸಮಸ್ಯೆ ನಡುವೆ ಈ ಬಾರಿ ನಮ್ಮ 123 ಕ್ಷೇತ್ರ ಗುರಿ ಮುಟ್ಟತಕ್ಕಂತಹ ನಿಟ್ಟಿನಲ್ಲಿ ಅವರು ಶ್ರಮ ಹಾಕುತ್ತಿದ್ದಾರೆ ಎಂದು ತಿಳಿಸಿದರು.
ಶಾಸಕ ಜಿ.ಟಿ..ದೇವೇಗೌಡ, ಜೆಡಿಎಸ್ ಕಾರ್ಯಕರ್ತರು ಹೆಚ್.ಡಿ.ಕುಮಾರಸ್ವಾಮಿಯವರ ಜೊತೆಗಿದ್ದರು.