ಬೆಂಗಳೂರು:- ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ಗೆ ಬಿಸಿಸಿಐ 12 ಕ್ರೀಡಾಂಗಣವನ್ನು ಅಂತಿಮಗೊಳಿಸಿದ್ದು, ಫೈನಲ್ ಪಂದ್ಯ ಅಹಮದಾಬಾದ್ನಲ್ಲಿರುವ ವಿಶ್ವದ ಅತಿ ದೊಡ್ಡ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
2023ರ ವಿಶ್ವಕಪ್ ಕ್ರಿಕೆಟ್ ಅಕ್ಟೋಬರ್ 5 ರಿಂದ ನವೆಂಬರ್ 19ರವರೆಗೆ ಆಯೋಜಿಸಿಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ. ನಾಕೌಟ್ ಸೇರಿದಂತೆ ಒಟ್ಟು 48 ಪಂದ್ಯಗಳು 46 ದಿನಗಳಲ್ಲಿ ನಡೆಯಲಿದೆ. ಬಿಸಿಸಿಐ ಇನ್ನೂ ಅಧಿಕೃತವಾಗಿ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಈ ಅವಧಿಯಲ್ಲಿ ಕೆಲ ಭಾಗಗಳಲ್ಲಿ ಮಳೆ ಬರುವ ಸಾಧ್ಯತೆ ಇರುವ ಕಾರಣ ಬಿಸಿಸಿಐ ಸ್ಥಳ ನಿಗದಿ ಮಾಡುವ ಸಂಬಂಧ ಚರ್ಚೆ ನಡೆಸುತ್ತಿದೆ.
ಸಾಮಾನ್ಯವಾಗಿ ಐಸಿಸಿ ವಿಶ್ವಕಪ್ ವೇಳಾಪಟ್ಟಿಯನ್ನು ಕನಿಷ್ಠ ಒಂದು ವರ್ಷ ಮುಂಚಿತವಾಗಿ ಪ್ರಕಟಿಸುತ್ತದೆ. ಆದರೆ ಈ ಬಾರಿ ಪಂದ್ಯಾವಳಿಗೆ ತೆರಿಗೆ ವಿನಾಯಿತಿ ಪಡೆಯುವುದು ಮತ್ತು ಪಾಕಿಸ್ತಾನ ತಂಡಕ್ಕೆ ವೀಸಾ ಕ್ಲಿಯರೆನ್ಸ್ ಪಡೆಯುವ ಸಂಬಂಧ ಭಾರತ ಸರ್ಕಾರದಿಂದ ಅಗತ್ಯ ಅನುಮತಿಗಳನ್ನು ಪಡೆಯಲು ಬಿಸಿಸಿಐ ಕಾಯುತ್ತಿರುವುದರಿಂದ ಅಂತಿಮ ವೇಳಾಪಟ್ಟಿ ಪ್ರಕಟಿಸಲು ತಡವಾಗುತ್ತಿದೆ.
ಯಾವ ಸ್ಥಳದಲ್ಲಿ ಆಯೋಜನೆ
ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಇಂದೋರ್, ರಾಜ್ಕೋಟ್ ಮತ್ತು ಮುಂಬೈನಲ್ಲಿ ಪಂದ್ಯ ನಡೆಯಲಿದೆ.
ಏನಿದು ತೆರಿಗೆ ಕಿತ್ತಾಟ?
ಐಸಿಸಿಯು ತೆರಿಗೆ ವಿನಾಯಿತಿ ಒಪ್ಪಂದಕ್ಕೆ ಬಿಸಿಸಿಐ 2014ರಲ್ಲಿ ಸಹಿ ಹಾಕಿದೆ. ಈ ಒಪ್ಪಂದದ ಪ್ರಕಾರ ಅಂತಾರಾಷ್ಟ್ರೀಯ ಟೂರ್ನಿಗಳ ಆತಿಥ್ಯ ವಹಿಸಿಕೊಳ್ಳುವ ದೇಶದ ಕ್ರಿಕೆಟ್ ಮಂಡಳಿ ಅಲ್ಲಿನ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಬೇಕಾಗುತ್ತದೆ. ಈ ತೆರಿಗೆ ವಿನಾಯಿತಿಯಲ್ಲಿ ನೇರ ಪ್ರಸಾರದ ಹಕ್ಕು ಸೇರಿದಂತೆ ಟೂರ್ನಿಯ ಆದಾಯಕ್ಕೆ ತೆರಿಗೆ ಹಾಕಬಾರದೆಂಬ ಒಪ್ಪಂದವಿದೆ. ಬಿಸಿಸಿಐ ಸಹಿ ಹಾಕಿದ ಬಳಿಕ 2016 ಟಿ20 ವಿಶ್ವಕಪ್, 2018ರ ಚಾಂಪಿಯನ್ಸ್ ಟ್ರೋಫಿ( 2021ರಲ್ಲಿ ಇದನ್ನು ಟಿ20 ವಿಶ್ವಕಪ್ಗೆ ಬದಲಾಯಿಸಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಯುಎಇಯಲ್ಲಿ ಟೂರ್ನಿ ನಡೆದಿತ್ತು), 2023ರ ಏಕದಿನ ವಿಶ್ವಕಪ್ ಆಯೋಜಿಸುವ ಹಕ್ಕನ್ನು ಪಡೆದುಕೊಂಡಿತ್ತು.
ಬಿಸಿಸಿಐಗೆ ಭಾರೀ ನಷ್ಟ:
ಭಾರತದಲ್ಲಿ ನೇರ ಪ್ರಸಾರ ಮತ್ತು ಟೂರ್ನಿಯ ಆದಾಯದ ಮೂಲಗಳಿಗೆ ತೆರಿಗೆ ಹಾಕುವ ಹಕ್ಕು ಸರ್ಕಾರಕ್ಕಿದೆ. 2023ರ ವಿಶ್ವಕಪ್ನ ಪ್ರಸಾರ ಆದಾಯದ ಮೇಲೆ ಶೇ.20 ರಷ್ಟು ತೆರಿಗೆ(ಹೆಚ್ಚುವರಿ ಶುಲ್ಕ ಹೊರತುಪಡಿಸಿ) ವಿಧಿಸಲಾಗುವುದು ಎಂದು ಕಳೆದ ವರ್ಷ ಐಸಿಸಿಗೆ ಭಾರತದ ತೆರಿಗೆ ಅಧಿಕಾರಿಗಳು ತಿಳಿಸಿದ್ದರು. ಈ ವಿಷಯದ ಬಗ್ಗೆ ಐಸಿಸಿ ಮತ್ತು ಬಿಸಿಸಿಐ ಜೊತೆ ಮಾತುಕತೆ ನಡೆಯುತ್ತಿದೆ. ಸರ್ಕಾರಗಳು ತೆರಿಗೆ ವಿನಾಯಿತಿ ನೀಡದೇ ಇದ್ದರೆ ಟೂರ್ನಿಯಿಂದ ಬರುವ ಆದಾಯದಲ್ಲಿ ಬೋರ್ಡ್ಗಳಿಗೆ ನೀಡುವ ಆದಾಯವನ್ನು ಕಡಿತಗೊಳಿಸಲಾಗುವುದು ಎಂದು ಐಸಿಸಿ ಈ ಹಿಂದೆ ತಿಳಿಸಿತ್ತು.
ಬಿಸಿಸಿಐ 2023ರ ವಿಶ್ವಕಪ್ ಪ್ರಸಾರ ಹಕ್ಕಿನಿಂದ 533.29 ದಶಲಕ್ಷ ಡಾಲರ್ (ಅಂದಾಜು 4,400 ಕೋಟಿ ರೂ.) ಆದಾಯ ಬರಬಹುದು ಎಂದು ಅಂದಾಜಿಸಿದೆ. ಈ ಆದಾಯಕ್ಕೆ ಶೇ.20 ರಷ್ಟು ತೆರಿಗೆ ವಿಧಿಸಿದರೆ 116 ದಶಲಕ್ಷ ಡಾಲರ್( ಅಂದಾಜು 955 ಕೋಟಿ ರೂ.) ಹಣವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡದೇ ಇದ್ದರೆ ಬಿಸಿಸಿಐ 955 ಕೋಟಿ ರೂ. ಆದಾಯವನ್ನು ಕಳೆದುಕೊಳ್ಳಲಿದೆ.