ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಆಟಗಾರರು ಕೊನೆಯ ಹಂತದ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಈ ಫೈನಲ್ ಪಂದ್ಯದ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿಯಿರುವ ಈ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಗಾಯದ ಆತಂಕವೊಂದು ಎದುರಾಗಿದೆ. ತಂಡದ ನಾಯಕ ರೋಹಿತ್ ಶರ್ಮಾ ಕೈಬೆರಳಿಗೆ ಗಾಯಮಾಡಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕೂ ಮುನ್ನಾದಿನ ನೆಟ್ಸ್ನಲ್ಲಿ ಅಬ್ಯಾಸ ನಡೆಸುತ್ತಿರುವಾಗ ರೋಹಿತ್ ಶರ್ಮಾ ಅವರ ಎಡ ಹೆಬ್ಬೆರೆಳಿಗೆ ಗಾಯವಾಗಿದೆ. ಹೀಗಾಗಿ ತಂಡದ ಫಿಸಿಯೋ ತಕ್ಷಣವೇ ಚಿಕಿತ್ಸೆ ನೀಡಿದರು. ನಂತರ ನೆಟ್ಸ್ಗೆ ಮರಳಿದರಾದರೂ ಬಳಿಕ ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ಕೆಲಕಾಲ ಚರ್ಚಿಸಿ ಅಭ್ಯಾಸ ನಿಲ್ಲಿಸಿ ಮೈದಾನಬಿಟ್ಟು ತೆರಳಿದರು.
ಇನ್ನು ರೋಹಿತ್ ಶರ್ಮಾ ಅವರ ಬೆರಳಿನ ಗಾಯದ ತೀವ್ರತೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇನ್ನು ಶನಿವಾರ ಟೀಮ್ ಇಂಡಿಯಾ ಆಟಗಾರರಿಗೆ ಅಭ್ಯಾಸ ನಡೆಸುವುದನ್ನು ಆವರ ಆಯ್ಕೆಗೆ ಬಿಡಲಾಗಿತ್ತು. ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್ ಸೇರಿದಂತೆ ಕೆಲ ಆಟಗಾರರು ಶನಿವಾರದ ಅಭ್ಯಾಸದಿಂದ ಹೊರಗುಳಿದಿದ್ದರು. ಆದರೆ ರೋಹಿತ್ ಶರ್ಮ, ಆರ್ ಅಶ್ವಿನ್ ಮತ್ತು ಉಮೇಶ್ ಯಾದವ್ ಸೇರಿದಂತೆ ಕೆಲ ಆಟಗಾರರು ಶನಿವಾರ ಕೂಡ ಅಭ್ಯಾಸ ನಡೆಸಿದ್ದಾರೆ. ಅಂತಿಮ ದಿನದಲ್ಲಿ ಆರ್ ಅಶ್ವಿನ್ ಬ್ಯಾಟಿಂಗ್ ಅಭ್ಯಾಸದ ಕಡೆಗೆ ಹೆಚ್ಚಿನ ಗಮನಹರಿಸಿದ್ದರು.
ಇನ್ನು ಟೀಮ್ ಇಂಡಿಯಾಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನವೇ ಸಾಕಷ್ಟು ಗಾಯದ ಸಮಸ್ಯೆಗಳು ಕಾಡಿದೆ. ವೇಗಿ ಜಸ್ಪ್ರೀತ್ ಬೂಮ್ರಾ, ರಿಷಭ್ ಪಂತ್, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಐಯ್ಯರ್ ಈಗಾಗಲೇ ಗಾಯದ ಕಾರಣದಿಂದಾಗಿಯೇ ಈ ವಿಶ್ವಕಪ್ ತಂಡದಿಂದ ಹೊರಗುಳಿಯುವಂತಾಗಿದೆ. ಇನ್ನು ಕೂಡ ತಂಡಕ್ಕೆ ಗಾಯದ ಸಮಸ್ಯೆ ಕಾಡಿದರೆ ಅದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟ್ರೋಫಿ ಎತ್ತಿಹಿಡಿಯುವ ಕನಸನ್ನು ಭಗ್ನಗೊಳಿಸಲಿದೆ.
ಟೀಮ್ ಇಂಡಿಯಾ ಸಂಪೂರ್ಣ ತಂಡ: ರೋಹಿತ್ ಶರ್ಮಾ(ನಾಯಕ), ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಕೆಎಲ್ ರಾಹುಲ್, ಕೆಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಯ್ದೇವ್ ಉನಾದ್ಕಟ್
ಆಸ್ಟ್ರೇಲಿಯಾ ಸಂಪೂರ್ಣ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್