ಅಮ್ರೋಹ: ಶಾಲೆಗೆ ಲಂಚ್ ಬಾಕ್ಸ್ನಲ್ಲಿ ಮಾಂಸಾಹಾರ ತಂದಿದ್ದಕ್ಕಾಗಿ ಉತ್ತರ ಪ್ರದೇಶದ ಅಮ್ರೋಹದಲ್ಲಿನ ಖಾಸಗಿ ಶಾಲೆಯ ಪ್ರಾಂಶುಪಾಲರು ನರ್ಸರಿ ವಿದ್ಯಾರ್ಥಿಯೊಬ್ಬನನ್ನು ಅಮಾನತು ಮಾಡಿದ ಘಟನೆ ನಡೆದಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿಯ ತಾಯಿ ಚಿತ್ರೀಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಪ್ರಾಂಶುಪಾಲ ಮತ್ತು ವಿದ್ಯಾರ್ಥಿಯ ತಾಯಿ ನಡುವೆ ನಡೆದ ತೀವ್ರ ಮಾತಿನ ಚಕಮಕಿಯು ವಿಡಿಯೋದಲ್ಲಿ ಸೆರೆಯಾಗಿದೆ. ಗುರುವಾರ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿಯೇ ಈ ಘಟನೆ ಸುದ್ದಿಯಾಗಿದೆ.
“ಅಂತಹ ನಡವಳಿಕೆಯ, ನಮ್ಮ ದೇವಸ್ಥಾನಗಳನ್ನು ಉರುಳಿಸುವ ಮತ್ತು ಶಾಲೆಗೆ ಮಾಂಸಾಹಾರ ತರುವಂತಹ ಈ ರೀತಿಯ ಮಕ್ಕಳಿಗೆ ಪಾಠ ಕಲಿಸಲು ನಾವು ಬಯಸುವುದಿಲ್ಲ” ಎಂದು ಮಗುವಿನ ತಾಯಿಯ ಬಳಿ ಹಿಲ್ಟನ್ ಕಾನ್ವೆಂಟ್ ಶಾಲೆಯ ಪ್ರಿನ್ಸಿಪಾಲ್ ರೇಗಾಡಿದ್ದಾರೆ.
ಮನೆಯಲ್ಲಿ ನೀವೇ ಕಲಿಸಿದ್ದೀರಿ ಎಂದು ಆರೋಪ: ಬಾಲಕ ಎಲ್ಲರಿಗೂ ತಾನು ತಂದ ಮಾಂಸಾಹಾರವನ್ನು ಕೊಡುವ ಬಗ್ಗೆ ಮತ್ತು ಅವರನ್ನು ಇಸ್ಲಾಂಗೆ ಮತಾಂತರ ಮಾಡುವ ಬಗ್ಗೆ ಮಾತನಾಡುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ. ತನ್ನ ಮಗ ಶಾಲೆಗೆ ಮಾಂಸಾಹಾರ ತಂದಿಲ್ಲ ಎಂದು ಮಗುವಿನ ತಾಯಿ ವಾದಿಸಿದ್ದರೆ, ಮಾಂಸಾಹಾರ ತಂದಿದ್ದಾಗಿ ಬಾಲಕನೇ ಒಪ್ಪಿಕೊಂಡಿದ್ದಾನೆ ಎಂದು ಪ್ರಿನ್ಸಿಪಾಲ್ ಹೇಳಿದ್ದಾರೆ.
ತಮ್ಮ ಐದು ವರ್ಷದ ಮಗ ಮತಾಂತರದಂತಹ ವಿಷಯಗಳನ್ನು ಮಾತನಾಡುವುದು ಸಾಧ್ಯವೇ ಇಲ್ಲ ಎಂದು ಪ್ರಾಂಶುಪಾಲರ ಆರೋಪಗಳನ್ನು ತಾಯಿ ನಿರಾಕರಿಸಿದ್ದಾರೆ. ಆದರೆ, ಇದೆಲ್ಲವನ್ನೂ ಬಾಲಕ ಮನೆಯಲ್ಲಿಯೇ ಕಲಿತಿರುತ್ತಾನೆ, ಪೋಷಕರೇ ಅವನಿಗೆ ಕಲಿಸಿದ್ದಾರೆ ಎಂದು ಪ್ರಾಂಶುಪಾಲ ಆರೋಪಿಸಿದ್ದಾರೆ.