“ಪ್ರಾಣ ಭಯದಿಂದ ನಿತ್ರಾಣರಾಗುತ್ತಿರುವ ಸಿಬ್ಬಂದಿ ಮತ್ತು ರೋಗಿಗಳು”
ಹನೂರು : ಹನೂರು ತಾಲ್ಲೂಕಿನ ಗಡಿಯಂಚಿನಲ್ಲಿ ಬರುವ ಮಾರ್ಟಳ್ಳಿ ಪಂಚಾಯ್ತಿ ವ್ಯಾಪ್ತಿಯ ಸುಳ್ವಾಡಿ ಗ್ರಾಮದಲ್ಲಿರುವ ರಜತ ಮಹೋತ್ಸವ ಪೂರೈಸಿರುವ ಏಕೈಕ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ವಹಣೆಯಿಲ್ಲದೆ ಸೊರಗಿ ಸವಕಲಾಗುತ್ತಿದ್ದು ಶಿಥಿಲ ಕಟ್ಟಡದಲ್ಲಿ ವೈದ್ಯರು ಪ್ರಾಣ ಭಯದಿಂದ ಕರ್ತವ್ಯ ನಿರ್ವಹಿಸಿದರೆ ಮೊದಲೇ ನಿತ್ರಾಣರಾಗಿ ಆಸ್ಪತ್ರೆಗೆ ಬರುವ ರೋಗಿಗಳು ಇಲ್ಲಿನ ಅವ್ಯವಸ್ಥೆ ಕಂಡು ಜೀವವನ್ನು ಕೈಯ್ಯಲ್ಲಿ ಹಿಡಿದುಕೊಂಡು ಆತಂಕದಲ್ಲೇ ಚಿಕಿತ್ಸೆ ಪಡೆದುಕೊಂಡು ಆತುರಾತುರದಲ್ಲಿ ತೆರಳಬೇಕಾದ ದುಸ್ಥಿತಿಯಿದೆ.
ಮಾರ್ಟಳ್ಳಿ ಪಂಚಾಯ್ತಿಯ ಕೇಂದ್ರಸ್ಥಾನ ಸೇರಿದಂತೆ ಕಾಡಂಚಿನ ಸೋಲಿಗರೇ ಅಧಿಕ ಸಂಖ್ಯೆಯಲ್ಲಿ ವಾಸಿಸುವ ಕೋಣನಕೆರೆ, ಕೀರೆಪಾತಿ, ನಾಲ್ ರೋಡ್ ಸೇರಿದಂತೆ 20 ಹಳ್ಳಿಗಳಿಗೆ ಇರುವ ಏಕೈಕ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಲಿಯಾಸ್ ದೊಡ್ಡಾಸ್ಪತ್ರೆಯೇ ಇದಾಗಿದೆ. ದಿನಂಪ್ರತಿ 100-150 ಮಂದಿ ರೋಗಿಗಳು ಬಂದು ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಜಿಲ್ಲಾ ಪಂಚಾಯ್ತಿ ವತಿಯಿಂದ 1998 ರಲ್ಲಿ ನಿರ್ಮಾಣಗೊಂಡಿರುವ ಈ ಆಸ್ಪತ್ರೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿ ನಿರ್ವಹಣೆಯನ್ನು ಕಾಣದೆ ನಿರ್ನಾಮದ ಹಂತ ತಲುಪಿರುವುದು ವಿಷಾಧನೀಯವೇ ಸರಿ.
ಮೇಲ್ಚಾವಣಿಯು ಶಿಥಿಲಗೊಂಡು ಬೇಸಿಗೆ ಕಾಲದಲ್ಲಿ ಮೇಲಿನ ಕಾಂಕ್ರೀಟ್ ಪದರವೆಲ್ಲಾ ಉದುರಿದರೆ ಮಳೆಗಾಲದಲ್ಲಿ ಬೀಳುವ ಮಳೆಗೆ ನೀರೆಲ್ಲ ಸೋರುವುದರಿಂದ ಮಂಚಗಳು ಪೀಠೋಪಕರಣಗಳು ಹಾನಿಗೀಡಾಗುತ್ತಿವೆ. ಗರ್ಭಿಣಿ ಯರು ರೋಗಿಗಳು ಮಳೆಯಲ್ಲೇ ನೆನೆದು ನಿಲ್ಲಬೇಕಾದ ದುಸ್ಥಿತಿ ಇದೆ. ಕಿಟಿಕಿ ಬಾಗಿಲುಗಳು ಹಾನಿಗೀಡಾಗಿ ಕಿತ್ತು ಬಂದಿದ್ದು ಹಾವು ಹಲ್ಲಿಗಳಂತ ವಿಷಜಂತುಗಳು ಒಳನುಗ್ಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಮುಂಭಾಗದ ನಾಮಫಲಕದ ಕಟ್ಟಡವೇ ನಾಮಾವಶೇಷದ ಹಂತ ತಲುಪಿದ್ದು ಸಿಮೆಂಟೆಲ್ಲಾ ಕಿತ್ತು ಬರುತ್ತಿದೆ. ಕಟ್ಟಡದ ಗೋಡೆಗಳ ಬಹುತೇಕ ಭಾಗ ಕಳಚಿ ಬೀಳುತ್ತಿದ್ದು ಸುಣ್ಣ ಬಣ್ಣವನ್ನು ಕಾಣದೆ ಭಣಗುಡುತ್ತಿದ್ದು ಓಭೀರಾಯನ ಕಾಲದ ಭೂತ ಬಂಗಲೆಯಂತಾಗಿದೆ. ನಿರ್ವಹಣೆ ಕಾಣದ ಶೌಚಾಲಯ ನಿರುಪಯುಕ್ತವಾಗಿದ್ದು ಆಸ್ಪತ್ರೆಗೆ ಆಗಮಿಸುವ ರೋಗಿಗಳು ಅನಾಗರೀಕರಂತೆ ಬಯಲು ಶೌಚಾಲಯ ಬಳಸಬೇಕಾದ ದುಸ್ಥಿತಿಯಿದೆ.
ಹಲವಾರು ವರ್ಷಗಳಿಂದ ಈ ಆಸ್ಪತ್ರೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯ ರಾಜೀವ್ರವರು ಅನೇಕ ಭಾರಿ ಮಾರ್ಟಳ್ಳಿ ಪಂಚಾಯ್ತಿಗೆ ಈ ಬಗ್ಗೆ ಪತ್ರ ಬರೆದಿದ್ದರೂ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
38 ಸದಸ್ಯರುಳ್ಳ ಹನೂರು ತಾಲ್ಲೂಕಿನಲ್ಲಿಯೇ ಬೃಹತ್ ಪಂಚಾಯ್ತಿ ಎನಿಸಿಕೊಂಡಿರುವ ಈ ಪಂಚಾಯತಿ ಮನರೇಗಾ ಯೋಜನೆಯಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ ನಡೆಸಿ ಕುಖ್ಯಾತಿ ಹೊಂದಿದ್ದು ಇಡೀ ಪಂಚಾಯ್ತಿ ವ್ಯಾಪ್ತಿಯ ಕಾಡಂಚಿನ ಹಳ್ಳಿಗಳಿಗೆ ಪ್ರಮುಖವಾಗಿ ಬೇಕಾದ ಸರ್ಕಾರಿ ಆಸ್ಪತ್ರೆಯ ಕಟ್ಟಡದ ದುರಸ್ಥಿಗೆ ಆಧ್ಯತೆ ನೀಡದಿರುವುದು ಶೋಚನೀಯವೆ ಸರಿ.
ಹೊಸ ಕಟ್ಟಡವನ್ನು ನಿರ್ಮಿಸುವುದು ಆಗಿರಲಿ ಇರುವ ಕಟ್ಟಡವನ್ನು ದುರಸ್ಥಿಗೊಳಿಸಿ ಸುಸ್ಥಿತಿಗೆ ತರಲು ಮುಂದಾಗದ ಜಿಲ್ಲಾಡಳಿತ ನಡೆ ತೀವ್ರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.