ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಗೆ ಸಿದ್ಧತೆ
ಬೆಂಗಳೂರು: ಈಗಷ್ಟೇ ವಿಧಾನಸಭಾ ಚುನಾವಣೆ ಮುಗಿದು ನೂತನ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದರ ಬೆನ್ನಲ್ಲಿಯೇ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಗೆ ಸಿದ್ಧತೆ ಆರಂಭವಾಗಿದೆ. ಎರಡು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯದ ಹಿನ್ನೆಲೆ ಶೀಘ್ರ ಚುನಾವಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ.
ಈ ಹಿನ್ನೆಲೆ ಮತದಾರರ ಪಟ್ಟಿ ಸಿದ್ಧತೆ ಮತ್ತು ಮತದಾನ ಕೇಂದ್ರಗಳ ಸ್ಥಾಪನೆ ಮಾಡುವ ಸಂಬAಧ ಕಾರ್ಯಪ್ರವೃತ್ತರಾಗುವಂತೆ ರಾಜ್ಯ ಚುನಾವಣೆ ಆಯೋಗವು ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಸಂಬAಧ ಶುಕ್ರವಾರ ಸುತ್ತೋಲೆ ಹೊರಡಿಸಿರುವ ಚುನಾವಣಾ ಆಯೋಗ, ಸೋಮವಾರದಿಂದ (ಮೇ 29) ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರದ ಮತದಾರರನ್ನು ಗುರುತಿಸುವ ಕಾರ್ಯ ಪ್ರಾರಂಭಿಸುವAತೆ ತಿಳಿಸಿದೆ.
ಜೂನ್ 4ರವರೆಗೆ ಈ ಕಾರ್ಯ ಜರುಗಲಿದೆ. ಜೂನ್ 5 ರಿಂದ 13ರವರೆಗೆ ಮತದಾರರ ಪಟ್ಟಿ ಪರಿಶೀಲನೆ ಕಾರ್ಯ ನಡೆಯಲಿದೆ. ಜೂನ್ 14ರಿಂದ ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಜೂನ್ 19ರಂದು ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದೆ. ಜೂನ್ 22ರಂದು ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಲು ಕೊನೆಯ ದಿನವಾಗಿದೆ. ಅಂತಿಮವಾಗಿ ಮತ್ತೊಮ್ಮೆ ಪರಿಶೀಲನೆ ಕಾರ್ಯ ಜೂನ್ 25ರಂದು ನಡೆಯಲಿದ್ದು, ಜೂನ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಎರಡು ವರ್ಷದಿಂದ ಚುನಾವಣೆ ಇಲ್ಲ: ಕರ್ನಾಟಕದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ಅವಧಿ ಮುಗಿದು ಬರೋಬ್ಬರಿ ಎರಡು ವರ್ಷ ಆಗಿದೆ. 2021ರ ಏಪ್ರಿಲ್ನಲ್ಲಿಯೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಯಬೇಕಿತ್ತು. ಆದರೆ, ಅವಧಿ ಮುಗಿದಿದ್ದರೂ ಹೊಸ ಚುನಾವಣೆ ಇನ್ನು ನಡೆದಿಲ್ಲ. ವಿವಿಧ ಕಾರಣಗಳಿಂದ ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡತ್ತಲೇ ಬಂದಿದೆ. ಈಗ ಹೊಸ ಸರ್ಕಾರ ಬಂದ ಬೆನ್ನಲ್ಲಿಯೇ ಜಿಪಂ ಮತ್ತು ತಾಪಂ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದ್ದು, ಮತದಾರರ ಪಟ್ಟಿ, ಮತ ಕೇಂದ್ರಗಳ ಸಿದ್ಧತೆಗೆ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗೆ ಸೂಚಿಸಿದೆ.
ಆಗಸ್ಟ್, ಸೆಪ್ಟೆಂಬರ್ನಲ್ಲಿ ಚುನಾವಣಾ ಸಾಧ್ಯತೆ: ಈಗಾಗಲೇ ಚುನಾವಣೆ ವಿಳಂಬ ಆಗಿರುವುದಕ್ಕೆ ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್ಗೆ 5 ಲಕ್ಷ ರೂ. ದಂಡವನ್ನು ಕೂಡ ಪಾವತಿಸಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಜಿಪಂ, ತಾಪಂ ಕ್ಷೇತ್ರ ಪುನರ್ ವಿಂಗಡಣೆ, ಮೀಸಲು ನಿಗದಿ ಪ್ರಕ್ರಿಯೆ ಮುಗಿದಿದೆ. ವಿಧಾನಸಭಾ ಚುನಾವಣೆ ಮುಕ್ತಾಯದ ಬಳಿಕ ಜಿಪಂ ಮತ್ತು ತಾಪಂ ಚುನಾವಣೆ ನಡೆಸುತ್ತೇವೆ ಎಂದು ಹೈಕೋರ್ಟ್ಗೆ ಸರ್ಕಾರ ತಿಳಿಸಿತ್ತು. ಆದ್ದರಿಂದ ಇದೇ ವರ್ಷದ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.