ಬಾಗಲಕೋಟೆ: ಪಾತಕಿಗಳು ಶೆಡ್ನ ಬಾಗಿಲು ಹೊರಗಿನಿಂದ ಲಾಕ್ ಮಾಡಿ ಬೆಂಕಿ ಕೊಟ್ಟ ಪರಿಣಾಮ ಒಂದೇ ಕುಟುಂಬದ ಇಬ್ಬರು ಸಜೀವವಾಗಿ ಸುಟ್ಟುಹೋಗಿದ್ದಾರೆ. ಇನ್ನೂ ಇಬ್ಬರು ಸುಟ್ಟ ಗಾಯಗಳೊಂದಿಗೆ ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದಾರೆ. ಈ ಭಯಾನಕ ಹತ್ಯಾಕಾಂಡ ಪ್ರಕರಣ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಬೆಳಗಲಿಯಲ್ಲಿ ನಡೆದಿದೆ.
ಬೆಳಗಲಿ ಪಟ್ಟಣದ ತೋಟದ ಮನೆಯಲ್ಲಿ ಈ ಘೋರ ಕೃತ್ಯ ಎಸಗಲಾಗಿದೆ. ಕುಟುಂಬ ಸಮೇತ ಸುಟ್ಟು ಹಾಕುವ ಉದ್ದೇಶದಿಂದಲೇ ದುಷ್ಟರು ತಡರಾತ್ರಿ ತಗಡಿನ ಶೆಡ್ನ ಬಾಗಿಲು ಹೊರಗಿನಿಂದ ಲಾಕ್ ಮಾಡಿ, ಪೆಟ್ರೋಲ್ ಸುರಿದು ಶೆಡ್ಗೆ ಬೆಂಕಿ ಹಚ್ಚಿದ್ದಾರೆ. ದುರಂತದಲ್ಲಿ ಜೈಬಾನ್ ಪೆಂಡಾರಿ (60), ಶಭಾನಾ ಪೆಂಡಾರಿ (22) ಸಾವಿಗೀಡಾಗಿದ್ದಾರೆ. ದಸ್ತಗೀರ್ ಸಾಬ್ ಪೆಂಡಾರಿ (60), ಶುಭನ್ ಪೆಂಡಾರಿ (26) ತೀವ್ರವಾಗಿ ಸುಟ್ಟ ಗಾಯಗಳೊಂದಿಗೆ ಮುಧೋಳ ತಾಲ್ಲೂಕಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್ಪಿ ಅಮರನಾಥ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿ 2:30ರ ಸುಮಾರಿಗೆ ಈ ಬರ್ಬರ ಕೃತ್ಯ ಎಸಗಲಾಗಿದೆ. ನೀಚರು ಮೊದಲಿಗೆ ಶೆಡ್ ಹೊರಗಿನಿಂದ ಲಾಕ್ ಮಾಡಿ, ಶೆಡ್ ಪಕ್ಕದಲ್ಲಿದ್ದ ಸಿಂಟ್ಯಾಕ್ಸ್ಗೆ ಸುಮಾರು 100 ಲೀಟರ್ ಪೆಟ್ರೋಲ್ ಸುರಿದಿದ್ದಾರೆ. 2 ಎಚ್ಪಿ ಮೆಷಿನ್ನಿಂದ ಶೆಡ್ ಸುತ್ತ ಪೆಟ್ರೋಲ್ ಹೊಡೆದು ಬೆಂಕಿ ಹಚ್ಚಿರುವ ಶಂಕೆ ಇದೆ. ಬೆಂಕಿಯ ಕೆನ್ನಾಲಿಗೆಗೆ ಇಡೀ ಶೆಡ್ ಸುಟ್ಟು ಕರಕಲಾಗಿದೆ.
ಮೃತರು ಹಾಗೂ ಗಾಯಾಳುಗಳು ಒಂದೇ ಕುಟುಂಬದವರು. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪರಿಚಿತರೇ ಕೃತ್ಯ ಎಸಗಿರುವ ಶಂಕೆ ಇದೆ. ಕುಟುಂಬದ ಬಗೆಗೆ ವೈಯಕ್ತಿಕ ದ್ವೇಷ ಹೊಂದಿದ್ದವರು, ಕುಟುಂಬವನ್ನು ಸ್ಥಳದಿಂದ ಒಕ್ಕಲೆಬ್ಬಿಸಲು ಬಯಸಿದವರು, ಕೌಟುಂಬಿಕ ದ್ವೇಷ ಹಾಗೂ ಜಮೀನು ವ್ಯಾಜ್ಯ ಹೊಂದಿದವರನ್ನು ಪ್ರಶ್ನಿಸಲಾಗುತ್ತಿದೆ.