ಮೈಸೂರು:- ನರಹಂತಕ ವೀರಪ್ಪನ್ ಸಹಚರ, ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಜ್ಞಾನಪ್ರಕಾಶ್ (63) ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿದ್ದಾರೆ.
ಮಾನವೀಯತೆ ಆಧಾರದಲ್ಲಿ ಅವರಿಗೆ ಸುಪ್ರೀಂ ಕೋರ್ಟ್ ಹಿಂದಿನ ವರ್ಷ ನ.26ರಂದು ಜಾಮೀನು ಮಂಜೂರು ಮಾಡಿತ್ತು. ಡಿ.20ರಂದು ಇಲ್ಲಿನ ಕಾರಾಗೃಹದಿಂದ ಬಿಡುಗಡೆಯಾಗಿ, ತಮ್ಮ ಊರಾದ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಾರ್ಟಳ್ಳಿ ಸಂದನಪಾಳ್ಯದಲ್ಲಿ ಕೃಷಿ ಮಾಡುತ್ತಿದ್ದರು.
ಅವರು 1993ರ ಬಾಂಬ್ ಸ್ಫೋಟ ಪ್ರಕರಣದಲ್ಲಿ ವೀರಪ್ಪನ್, ಸೈಮನ್, ಬಿಲವೇಂದ್ರನ್, ಮೀಸೆಕಾರ ಮಾದಯ್ಯ ಜೊತೆಗೆ ಭಾಗಿಯಾಗಿದ್ದರೆಂದು ಟಾಡಾ ಕಾಯ್ದೆಯಡಿ ಮೈಸೂರಿನ ?ಟಾಡಾ ನ್ಯಾಯಾಲಯ?ವು 1997ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಕ್ಷಮಾಪಣೆ ನೀಡಿದ ಕಾರಣ 2014ರಲ್ಲಿ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯಿಂದ ಜೀವಾವಧಿಗೆ ಇಳಿಸಿ ತೀರ್ಪು ನೀಡಿತ್ತು.
ಕಾರಾಗೃಹದಲ್ಲಿದ್ದಾಗ ಇಲಾಖೆಯು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿತ್ತು. ಬಿಡುಗಡೆಯಾದ ನಂತರ ಚಿಕಿತ್ಸೆ ಪಡೆದಿರಲಿಲ್ಲ. ಇತ್ತೀಚೆಗೆ, ಕಾಯಿಲೆ ತೀವ್ರಗೊಂಡಿದ್ದು ಮೈಸೂರಿನ ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಹಾಗೂ ಉದ್ಯಮಿ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮುಂದಿನ 12 ವಾರಗಳವರೆಗೆ ಚುಚ್ಚುಮದ್ದು ಪಡೆಯಬೇಕು. ಅದಕ್ಕಾಗಿ ಪ್ರತಿ ವಾರಕ್ಕೆ 30 ಸಾವಿರ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಅಷ್ಟು ಹಣ ಭರಿಸುವ ಶಕ್ತಿ ಅವರಿಗಿಲ್ಲ. ನಾವು ಗೆಳೆಯರ ಬಳಗ ಹಾಗೂ ಸಾಮಾಜಿಕ ಕಾರ್ಯಕರ್ತರ ಮೂಲಕ ಹಣ ಸಂಗ್ರಹಿಸುತ್ತಿದ್ದೇವೆ. ಮಾನವೀಯತೆ ಆಧಾರದಲ್ಲಿ ಉಳ್ಳವರು ಕೈಜೋಡಿಸಬೇಕು ಎಂದು ಪ್ರಸನ್ನ ಕೋರಿದ್ದಾರೆ.
ಸಾಯುವ ಮುನ್ನ ಅಪರಾಧ ಮುಕ್ತನಾಗಬೇಕು. ನನ್ನನ್ನು ಸಂಪೂರ್ಣ ಬಿಡುಗಡೆ ಮಾಡಲು ಸರ್ಕಾರ ಕ್ರಮ ವಹಿಸಬೇಕೆಂಬುದೇ ನನ್ನ ಕೊನೆಯಾಸೆ. ಅದಕ್ಕಾಗಿ ಚಿಕಿತ್ಸೆ ಕೊಡಿಸಿ ಎಂದು ಜ್ಞಾನಪ್ರಕಾಶ್ ಪ್ರತಿಕ್ರಿಯಿಸಿದರು.