ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದೆಯಾತ್ರೆ ನಡೆಸಿದ್ದ ಸಂದರ್ಭದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪ ಪ್ರಕರಣದಲ್ಲಿ ಕೃಷಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯ ಸ್ವಾಮಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಕರ್ನಾಟಕ ಹೈಕೋರ್ಟ್ ಸಚಿವರ ವಿರುದ್ಧ ಕನಕಪುರ ತಾಲೂಕಿನ ಐಜೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಮತ್ತು ಪ್ರಕರಣಕ್ಕೆ ಸಂಬAಧಿಸಿದ ನಗರದ 42ನೇ ಎಸಿಎಂಎA ನ್ಯಾಯಾಲಯದ ವಿಚಾರಣೆ ರದ್ದುಪಡಿಸಿದೆ.
ಪ್ರಕರಣ ಸಂಬAಧ ತಮ್ಮ ವಿರುದ್ಧದ ಎಫ್ಐಆರ್ ಮತ್ತು ಎಸಿಎಂಎA ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಸಚಿವ ಚೆಲುವರಾಯ ಸ್ವಾಮಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಇದೇ ಆರೋಪದ ಮೇಲೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿರುದ್ಧ ಐಜೂರು ಠಾಣಾ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ಈ ಹಿಂದೆ ರದ್ದುಪಡಿಸಿತ್ತು. ಆ ಆದೇಶವನ್ನು ಪರಿಗಣಿಸಿ ಇದೀಗ ಚೆಲುವರಾಯ ಸ್ವಾಮಿ ಮೇಲಿನ ಪ್ರಕರಣವನ್ನೂ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಅರ್ಜಿದಾರರ ವಾದವೇನು?; ಹೈಕೋರ್ಟ್ ಮೆಟ್ಟಿಲೇರಿದ್ದ ಸಚಿವ ಚೆಲುವರಾಯಸ್ವಾಮಿ, ಕರ್ನಾಟಕ ಸರ್ಕಾರ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಮೂಲಕ ಕ್ರಮ ಕೈಗೊಳ್ಳಬೇಕು. ಆದರೆ, ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದAತೆ ನಿರ್ದೇಶಿಸಿ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆಯಡಿ ಸರ್ಕಾರ ನೋಟಿಫಿಕೇಷನ್ ಹೊರಡಿಸಿದೆ. ಆದರೆ, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿ ಹೊರಡಿಸಿಲ್ಲ ಎಂದು ವಾದಿಸಿದ್ದರು. ಅಲ್ಲದೆ, ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕ್ರಮ ಜರುಗಿಸಲು ಸರ್ಕಾರ ಮುಂದಾಗಿದ್ದು, ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ, ತಮ್ಮ ವಿರುದ್ಧದ ಎಫ್ಐಆರ್, ಎಸಿಎಂಎA ನ್ಯಾಯಾಲಯದ ಸಮನ್ಸ್ ಮತ್ತು ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದ್ದರು. ಅದನ್ನು ಹೈಕೋರ್ಟ್ ಪುರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು 2022ರ ಜ.9ರಿಂದ 10 ದಿನ ಪಾದಯಾತ್ರೆ ಹಮ್ಮಿಕೊಂಡಿತ್ತು. ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಚೆಲುವರಾಯ ಸ್ವಾಮಿ ವಿರುದ್ಧ ಐಜೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಪ್ರಕರಣ ಸಂಬAಧ 42ನೇ ಎಸಿಎಂಎA ನ್ಯಾಯಾಲಯವು 2023ರ ಮಾ.7ರಂದು ಸಚಿವರ ವಿರುದ್ಧ ಸಮನ್ಸ್ ಜಾರಿಗೊಳಿಸಿತ್ತು. ಆದರೆ ಈಗ ಎಫ್ಐಆರ್ ಮತ್ತು ವಿಚಾರಣೆ ರದ್ದುಪಡಿಸಲಾಗಿದೆ.