ಮೈಸೂರು: “ಸಪ್ನ ಬುಕ್ ಹೌಸ್’ ಎಂಬ ಪುಸ್ತಕ ಪ್ರಕಾಶನ ಸಂಸ್ಥೆಯಿಂದ ‘ಕನ್ನಡ ವಿಶ್ವಕೋಶ’ದ ಕೃತಿಚೌರ್ಯ ಎಸಗಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕುವೆಂಪು ಕನ್ನಡ ಧ್ಯಯನ ಸಂಸ್ಥೆಯ ಕನ್ನಡ ವಿಶ್ವಕೋಶದ ಗೌರವ ಸಂಪಾದಕ ಡಾ.ಹಾ.ತಿ.ಕೃಷ್ಣೇಗೌಡ ಹೇಳಿದರು.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಕರ್ನಾಟಕದ ದೊಡ್ಡ ಪುಸ್ತಕ ಪ್ರಕಾಶನ ಸಂಸ್ಥೆಯಾದ ಸ್ವಪ್ನ ಬುಕ ಹೌಸ್ ಸಂಸ್ಥೆಯು ಯಾವುದೇ ಅನುಮತಿ ಪಡೆಯದೆ, ಹೇಳದೆ ಕೇಳದೆ ಕನ್ನಡ ವಿಶ್ವಕೋಶದಿಂದ ನೇರವಾಗಿ ವಿಷಯ ತೆಗೆದುಕೊಂಡು ‘ಸ್ವಂತ’ ಪುಸ್ತಕವೆಂದು ಪ್ರಕಟಿಸಿರುವುದು! ವಿಷಾಧನೀಯ ಎಂದರು.
‘ಸಪ್ನ ಬುಕ್ ಹೌಸ್’ ಎಂಬ ಪುಸ್ತಕ ಪ್ರಕಾಶನ ಸಂಸ್ಥೆ ಕರ್ನಾಟಕದ ಚರಿತ್ರೆಗೆ ಸಂಬಂಧಿಸಿದಂತೆ ‘ಕರ್ನಾಟಕ ಇತಿಹಾಸ ಮಾಲೆ’ ಎಂಬ ಶೀರ್ಷಿಕೆಯಲ್ಲಿ ಕೆಲವು ಪುಸ್ತಕವನ್ನು ಪ್ರಕಟಿಸಿದೆ. ಈ ಮಾಲೆಯಲ್ಲಿ ಪ್ರಕಟಿಸಿರುವ 6 ಕೃತಿಗಳು ಹೀಗಿವೆ: ಕದಂಬರು, ಗಂಗರು, ಚಾಲುಕ್ಯರು, ಹೊಯ್ಸಳರು, ಶಾತವಾಹನರು, ವಿಜಯನಗರ ಸಾಮ್ರಾಜ್ಯ ಈ 6 ಕೃತಿಗಳನ್ನು ‘ಆರ್ಡಿಜಿ’ ಎಂಬ ಸಂಕೇತನಾಮದಲ್ಲಿ ಪ್ರಕಟಿಸಿದೆ.
ಈ 6 ಪುಸ್ತಕಗಳಲ್ಲಿ ಕದಂಬರು, ಹೊಯ್ಸಳರು, ಚಾಲುಕ್ಯರು ಮತ್ತು ವಿಜಯನಗರ ಸಾಮ್ರಾಜ್ಯ – ಈ 4 ಪುಸ್ತಕಗಳ ವಿಚಾರವನ್ನು ನೇರವಾಗಿ, ಅನಾಮತ್ತಾಗಿ, ಯಥಾವತ್ತು ಕನ್ನಡ ವಿಷಯ ವಿಶ್ವಕೋಶ ‘ಕರ್ನಾಟಕ ಸಂಪುಟ-೧’ ಮತ್ತು ಕರ್ನಾಟಕ ಸಂಪುಟ-೨’ – ಈ ಎರಡು ಸಂಪುಟಗಳಿಂದ ಎತ್ತಿಕೊಳ್ಳಲಾಗಿದೆ. ಹೀಗೆ ಮಾಡುವಾಗ ಲೇಖನದ ಶೀರ್ಷಿಕೆಯನ್ನು ಮಾತ್ರ ಬದಲಾಯಿಸಲಾಗಿದೆ. ಅಲ್ಲೊಂದು ಇಲ್ಲೊಂದು ಪದವನ್ನು ಮಾರ್ಪಡಿಸಿದೆ ಅಷ್ಟೇ, ಕರ್ನಾಟಕ ವಿಷಯ ವಿಶ್ವಕೋಶ ಸಂಪುಟದಲ್ಲಿ ಮೂಲ ಲೇಖನ ‘ವಿಜಯನಗರ’ ಎಂದಿದ್ದರೆ ಅದನ್ನು ‘ವಿಜಯನಗರ ಸಾಮ್ರಾಜ್ಯ’ ಎಂದು ಬದಲಾಯಿಸಿದೆ. ‘ಕದಂಬ ವಂತ’ ಎಂಬುದು ‘ಕದಂಬರು’ ಎಂದಾಗಿದೆ. ‘ಹೊಯ್ಸಳ ವಂಶ’ ಎಂಬುದು ‘ಹೊಯ್ಸಳರು’ ಎಂದಾಗಿದೆ. ‘ಚಾಳುಕ್ಯ ವಂಶ’ ಎಂಬುದು ‘ಚಾಲುಕ್ಯರು’ ಆಗಿದೆ. ಈ ಒಂದು ಬದಲಾವಣೆಯನ್ನುಳಿದರೆ ಲೇಖನದ ಮೊದಲ ಅಕ್ಷರದಿಂದ ಕೊನೆಯ ಅಕ್ಷರದವರೆಗೆ ಯಥಾವತ್ತು ನಕಲು ಮಾಡಿ ಅಚ್ಚುಹಾಕಲಾಗಿದೆ ಎಂದು ಹೇಳಿದರು.
ಕರ್ನಾಟಕ ಪುಸ್ತಕ ಪ್ರಕಾಶನದ ದೊಡ್ಡ ಸಂಸ್ಥೆಯೊಂದು ಇಂಥ ‘ಸಣ್ಣ’ ಕೆಲಸಮಾಡಿರುವುದು ಕನ್ನಡಕ್ಕೆ, ಕನ್ನಡ ವಿಶ್ವಕೋಶಕ್ಕೆ ಮಾಡಿರುವ ದ್ರೋಹ ಹಾಗೂ ಮೋಸವಾಗಿದೆ. ಮೈಸೂರು ವಿಶ್ವವಿದ್ಯಾನಿಲಯ ಈ ಬಗ್ಗೆ ಕ್ರಮಕೈಗೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ಪ್ರಾಧ್ಯಾಪಕ ಡಾ.ಪಿ.ಗೌರೀಶ್, ಕಾಂಗ್ರೆಸ್ ವಕ್ತಾರ ಶ್ರೀನಿವಾಸ್, ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಅಶೋಕ್ ಕುಮಾರ್, ವಕೀಲ ಎಂ.ಶಿವಣ್ಣ ಗೋಷ್ಠಿಯಲ್ಲಿದ್ದರು.