ಮೈಸೂರು: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಮಕೃಷ್ಣನಗರದಲ್ಲಿರುವ ಸಿಎಂ ಸಿದ್ದರಾಮಯ್ಯನವರ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರನ್ನು ಪೊಲೀಸರು ತಡೆದು ಬಂಧಿಸಿ ಬಿಡುಗಡೆಗೊಳಿಸಿದರು.
ಗುರುವಾರ ಕಬ್ಬಿಗೆ ಬೆಂಬಲ ಬಿಡುಗಡೆಗೊಳಿಸಬೇಕು. ರಾತ್ರಿ ಹೊತ್ತು ನೀಡುತ್ತಿರುವ ವಿದ್ಯುತ್ ಅನ್ನು ಹಗಲಲ್ಲೇ ರೈತರಿಗೆ ನೀಡಬೇಕು. ಬರ ಪರಿಹಾರ ಶೀಘ್ರ ಬಿಡುಗಡೆಗೊಳಿಸಬೇಕು.
ವೈಜ್ಞಾನಿಕ ಮಾನದಂಡದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಬೇಕೆಂಬುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಅವರ ನಿವಾಸದ ಸಮೀಪ ಬ್ಯಾರಿಕೇಡ್ ಹಾಕಿದ್ದರಿಂದ ಬ್ಯಾರಿಕೇಡ್ ಮುಂಭಾಗವೇ ಧರಣಿ ನಡೆಸಲು ಮುಂದಾದರೂ ಈ ವೇಳೆ ಪ್ರತಿಭಟನೆಗೂ ಅವಕಾಶ ನೀಡದ ಪೊಲೀಸರ ತಂಡ ೫೦ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಕರೆದೊಯ್ದರು.
ಪ್ರತಿಭಟನೆಗೂ ಅವಕಾಶ ನೀಡದ ಪೊಲೀಸರ ನಡೆಯನ್ನು ರೈತ ನಾಯಕರು ಖಂಡಿಸಿದರಲ್ಲದೆ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಂದೆಯೂ ನಾನಾ ರೀತಿಯಲ್ಲಿ ಹೋರಾಟ ಮುಂದುವರೆಸುವುದಾಗಿ ಹೇಳಿದರು.