ಮೈಸೂರು: ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆ ಹಗರಣದ ಆರೋಪದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಟುಂಬಸ್ಥರ ವಿರುದ್ಧ ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರು ಪ್ರತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಈಚೆಗೆ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ಮುಡಾ ಸ್ವತ್ತನ್ನು ಜೆ.ದೇವರಾಜು ಎಂಬುವರಿಗೆ ಸೇರಿದ್ದು, ಎಂಬಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಮುಡಾಗೆ ವಂಚಿಸಿರುವುದಲ್ಲದೇ ಸುಳ್ಳು ಕ್ರಯ ಪತ್ರ, ದಾಖಲೆ ಮತ್ತು ವಾಸ್ತಂಶಗಳನ್ನು ಮುಚ್ಚಿಟ್ಟು ಮಾಹಿತಿ ನೀಡಿದ್ದಾರೆ ಎಂದು ಅವರು ತಮ್ಮ ಕೆಲ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ ಎಂದರು.
ಸರ್ವೆ ನಂ.464ರ 3.16 ಎಕರೆ ಜಮೀನಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಿ, ಅವಾರ್ಡ್ ನಿರ್ಣಯ ಮಾಡಿ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರಿಂದ ನಿಯಮದ ಪ್ರಕಾರ ಭೂ ಸ್ವಾಧೀನದಿಂದ ಕೈ ಬಿಡಲು ಅವಕಾಶ ಇಲ್ಲದಿದ್ದರೂ ಭೂ ಸ್ವಾಧೀನ ಕೈಬಿಡಲಾಗಿದೆ ಎಂಬಂತೆ ರಾಜ್ಯ ಪತ್ರ ಹೊರಡಿಸುವಂತೆ ಮಾಡಲಾಗಿದೆ. ಸರ್ವೆ ನಂ.464ರ 3.16 ಎಕರೆ ಜಮೀನಿನಲ್ಲಿ ಉದ್ಯಾನವ ಮತ್ತು ನಿವೇಶನಗಳನ್ನು ರಚನೆ ಮಾಡಿದ ಮುಡಾದ ಸ್ವತ್ತನ್ನುಯಾವುದೇ ಹಕ್ಕು ಭಾದ್ಯತೆಯನ್ನು ಹೊಂದಿಲ್ಲದ ಜೆ.ದೇವರಾಜ ಅವರ ಮಾಲೀಕತ್ವಕ್ಕೆ ಮತ್ತು ಸ್ವಾಧೀನಕ್ಕೆ ಒಳಪಟ್ಟ ಕೃಷಿಭೂಮಿಯನ್ನು ಮಾಡಲಾಗಿದೆ ಎಂಬಂತೆ ತಮ್ಮ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಸುಳ್ಳು ಕ್ರಯಪತ್ರವನ್ನು ಸೃಷ್ಟಿಸಿ ಈ ಪತ್ರವನ್ನು 2004ರಲ್ಲಿ ನೊಂದಣಿ ಮಾಡಿಕೊಂಡಿದ್ದಾರೆ.
ಆ ನಂತರ ತಮ್ಮ ಬಾಮೈದ ಮಲ್ಲಿಕಾರ್ಜುನರ ಮಾಲೀಕತ್ವ ಮತ್ತು ಸ್ವಾಧೀನದಲ್ಲಿರುವ ಕೃಷಿ ಭೂಮಿ ದಾನಮಾಡಲಾಗಿದೆ ಎಂಬಂತೆ ಮತ್ತು ಅನ್ಯಕ್ರಾಂತ ಆದೇಶ ಪಡೆದಿರುವ ವಿಚಾರವನ್ನು ಮುಚ್ಚಿಟ್ಟು ಕೃಷಿ ಭೂಮಿ ಎಂಬಂತೆ ತಮ್ಮ ಹೆಂಡತಿ ಬಿ.ಎಂ.ಪಾವರ್ತಿ ಹೆಸರಿಗೆ ಸುಳ್ಳು ದಾನಪತ್ರವನ್ನು ಸೃಷ್ಟಿಸಿ 2010ರಲ್ಲಿ ನೊಂದಾಯಿಸಿದ್ದಾರೆ ಎಂದರು.
ದಾನಪತ್ರವನ್ನು ಆಧರಿಸಿ, ಸ್ವತ್ತಿನಲ್ಲಿ ಪ್ರಾಧಿಕಾರದಿಂದ ರಸ್ತೆ, ಉದ್ಯಾನವನ, ನಿವೇಶನಗಳನ್ನು ರಚನೆ ಮಾಡಿರುವ ವಾಸ್ತವಾಂಶವನ್ನು ಮತ್ತು ಅನ್ಯಕ್ರಾಂತ ಆದೇಶ ಪಡೆದಿರುವ ವಿಚಾರವನ್ನು ಮುಚ್ಚಿಡಲಾಗಿದೆ. ಈ ಎಲ್ಲದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಬೇಕು ಎಂದರು.
ಈ ಎಲ್ಲ ಕೃತ್ಯಗಳು ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲಿ ನಡೆದಿರುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಂಡತಿ ಬಿ.ಎಂ.ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಸಹಕರಿಸಿರುವ ಜೆ.ದೇವರಾಜು, ಜಿಲ್ಲಾಧಿಕಾರಿ ಎಸ್.ಸೆಲ್ವಕುಮಾರ್, ತಹಸೀಲ್ದಾರ್ ಮಾಳಿಗೆ ಶಂಕರ್ ಮತ್ತು ಮುಡಾ ಆಯುಕ್ತ ಡಿ.ಬಿ.ನಟೇಶ್ ಇತರೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಮೊಕದ್ದಮೆ ದಾಖಲಿಸಿದ್ದು, ಈ ಬಗ್ಗೆ ಸಮಗ್ರ ತನಿಖೆಯನ್ನು ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ಹೇಳಿದರು.
ಪರಿಸರ ವಾದಿ ಭಾನು ಮೋಹನ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.