ಬೆಂಗಳೂರು: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಾದ, ಪ್ರತಿವಾದ ಆಲಿಸಿದ ಬಳಿಕ ಸೆಪ್ಟೆಂಬರ್ 2ಕ್ಕೆ ಮುಂದೂಡಲಾಗಿದೆ. ಸಿಎಂ ಸಿದ್ದರಾಮಯ್ಯ ಪರ ವಕೀಲ ರವಿವರ್ಮ ಕುಮಾರ್ ವಾದ ವಾದಮಂಡಿಸಿದ್ದಾರೆ. ಒಟ್ಟಾರೆಯಾಗಿ ಬೆಳಗ್ಗೆಯಿಂದ ಸುದೀರ್ಘ ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್, ಅರ್ಜಿ ವಿಚಾರಣೆಯನ್ನು ಸೋಮವಾರ (ಸೆಪ್ಟೆಂಬರ್ 2ಕ್ಕೆ) ಮಧ್ಯಾಹ್ನ 2.30ಕ್ಕೆ ಮತ್ತೆ ವಿಚಾರಣೆ ಆರಂಭವಾಗಲಿದೆ.
ಅನುಮತಿ ಬೇಕೋ ಬೇಡವೋ ನಿರ್ಧರಿಸಬೇಕು. ಅನುಮತಿ ನೀಡಿದ್ದು ಸರಿಯೋ ಇಲ್ಲವೋ ನಿರ್ಧರಿಸಬೇಕು. ಹೀಗಾಗಿ ಮಧ್ಯಂತರ ಆದೇಶ ಮುಂದುವರಿಕೆ ಆಗುವುದು ಎಂದು ನ್ಯಾ.ಎಂ.ನಾಗಪ್ರಸನ್ನ ಹೇಳಿದ್ದಾರೆ.
ದೂರುದಾರ ಟಿ.ಜೆ.ಅಬ್ರಹಾಂ ಪರ ವಕೀಲ ರಂಗನಾಥ್ ರೆಡ್ಡಿ ವಾದ: ರಾಜ್ಯಪಾಲರ ಮುಂದೆ ಯಾವುದೇ ದೂರು ಬಾಕಿಯಿಲ್ಲ. 2 ಕೇಸ್ಗಳಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗಿದೆ. 2 ಕೇಸ್ಗಳಲ್ಲಿ ಸ್ಪಷ್ಟೀಕರಣ ಕೇಳಿ ಹಿಂದಿರುಗಿಸಲಾಗಿದೆ ಎಂದು ಹೈಕೋರ್ಟ್ಗೆ ಟಿ.ಜೆ.ಅಬ್ರಹಾಂ ಪರ ವಕೀಲರಿಂದ ಮಾಹಿತಿ ನೀಡಲಾಗಿದೆ.
2021ರ ಅ.25ರಂದು 50:50 ನಿವೇಶನ ಹಂಚಿಕೆಗೆ ಮನವಿ ಸಲ್ಲಿಸಲಾಯಿತು. ಸಿಎಂ ಪುತ್ರ ಇದ್ದ ಮುಡಾ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ನಂತರ ಸಿಎಂ ಪತ್ನಿ 2021ರ ನ.25ರಂದು ಹಕ್ಕು ಬಿಡುಗಡೆ ಮಾಡಿದರು. ನಂತರ ಸಿಎಂ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಯಾವುದೇ ಜಮೀನು ಕಳೆದುಕೊಳ್ಳದೇ ಸಿಎಂ ಪತ್ನಿ ಪರಿಹಾರ ಪಡೆದಿದ್ದಾರೆ ಎಂದು ದೂರುದಾರ ಟಿ.ಜೆ.ಅಬ್ರಹಾಂ ಪರ ವಕೀಲ ರಂಗನಾಥ್ ರೆಡ್ಡಿ ವಾದಮಂಡನೆ ಅಂತ್ಯ ಮಾಡಿದರು.
ಖಾಸಗಿ ದೂರು ಮುಂದುವರಿಕೆಗೆ ಅನುಮತಿ ನೀಡಲು ದೂರುದಾರರಿಂದ ಮನವಿ ಮಾಡಲಾಗಿದ್ದು, ಹೈಕೋರ್ಟ್ ಪರಿಶೀಲನೆಯಲ್ಲಿರುವಾಗ ಖಾಸಗಿ ದೂರು ವಿಚಾರಣೆ ಮುಂದುವರಿಕೆ ಸೂಕ್ತವಲ್ಲ. ಹೀಗಾಗಿಯೇ ವಿಚಾರಣೆ ಮುಂದುವರಿಸದಂತೆ ಜಡ್ಜ್ ಆದೇಶ ನೀಡಿದ್ದಾರೆ.