ಚಿತ್ರದುರ್ಗ:- ನಾನು ಭ್ರಷ್ಟಾಚಾರ ಸಹಿಸಲ್ಲ. ನಾನು ಸಚ್ಚಾರಿತ್ರ್ಯ ವ್ಯಕ್ತಿ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ರೀಯಲ್ ಎಸ್ಟೇಟ್ ಹಾಗೂ ಹಣ ಕಬಳಿಕೆ ಆರೋಪ ಬಂದಿರುವುದರಿಂದ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನಾವು ಸಾಚಾ ಇದೀವಿ ಎಂದು ರಾಜ್ಯದ ಜನರಿಗೆ ಸಾರಿ ಸಾರಿ ಹೇಳಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೂಕಾಲ್ ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಒಂದು ರೂಪಾಯಿ ಅಭಿವೃದ್ದಿ ಕಾರ್ಯ ಮಾಡಲಿಲ್ಲ. ಬದಲಾಗಿ ಸ್ವಜನ ಪಕ್ಷಪಾತದಲ್ಲಿ ಸಿಲುಕಿ, ತಮ್ಮ ಸ್ವರ್ಥಕ್ಕಾಗಿ ಅಧಿಕಾರ ಮಾಡುತ್ತ ಬಂದಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಅಂದಿನಿಂದ ಸಾಕಷ್ಟು ಆರೋಪಗಳು ಬರುತ್ತಿವೆ. ಆದರೂ ಕೂಡ ಸಿದ್ದರಾಮಯ್ಯ ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಅಪಾಧನೆಗಳು ಬಂದ ಮೇಲೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಅವಕಾಶ ನೀಡಬೇಕು. ಈ ಹಿಂದೆ ರಾಮಕೃಷ್ಣ ಹೆಗಡೆ ಅವರ ಮೇಲೆ ಟೆಲಿಪೋನ್ ಕದ್ದಾಲಿಕೆ ಆರೋಪ ಬಂದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದೇ ರೀತಿ ಇಂದು ಸಿದ್ದರಾಮಯ್ಯ ಕೂಡ ಮುಂದಾಗಬೇಕು ಎಂದು ಹೇಳಿದ ಅವರು, ಸಿದ್ದರಾಮಯ್ಯ ಅವರು 3 ಎಕರೆ 20 ಗುಂಟೆ ಜಮೀನನ್ನು ಡಿ ನೋಟಿಫಿಕೇಷನ್ ಮಾಡಿ ತಮ್ಮ ಹೆಂಡತಿಗೆ ಕೊಟ್ಟಿದ್ದಾರೆ. ಅಲ್ಲದೆ 50-50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿದ್ದಾರೆ ಇದು ಕೂಡ ಸರ್ಕಾರದ ಸುತ್ತೋಲೆ ಪ್ರಕಾರ ತಪ್ಪಾಗಿದ್ದು, ಇದರಲ್ಲೇ ಸ್ವಷ್ಟವಾಗಿ ಕಾಣುತ್ತಿದೆ ಅಕ್ರಮ ನಡೆದಿದೆ ಎಂಬುದು. ಆದ್ದರಿಂದ ಸಿದ್ದರಾಮಯ್ಯ ಹಾಗೂ ಸಂಬಂದ ಪಟ್ಟ ಸಚಿವರು ರಾಜೀನಾಮೆ ಕೊಟ್ಟು ನಾವು ಸಾಚಾ ಇದೀವಿ ಎಂಬುದನ್ನು ತೋರಿಸಬೇಕು ಎಂದು ಒತ್ತಾಯಿಸಿದರು.
ಎಸ್ಸಿ, ಎಸ್ಟಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಬೇನಾಮಿ ಅಕೌಂಟ್ ಗಳಿಗೆ ಹಣ ಜಮೆ ಆಗುತ್ತೆ ಎಂದರೆ ಏನು ಅರ್ಥ. 180 ಕೋಟಿ ರೂ ಹಗರಣ ನಡೆಸಿ, ಬೇರೆ ಬೇರೆ ಬ್ಯಾಂಕ್ ನಲ್ಲಿ ಖಾತೆ ತೆರೆದು ಹಣ ಜಮೆ ಮಾಡಿರುವುದು ಇತಿಹಾಸದಲ್ಲೇ ಮೊದಲು. ಇದಕ್ಕೆ ಸಿದ್ದರಾಮಯ್ಯ ನೇರ ಹೊಣೆ ಹೊರಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಸಿಬಿಐ, ಇಡಿ, ಇಂಕಮ್ ಟ್ಯಾಕ್ಸ್ ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಸದಾ ಆರೋಪ ಮಾಡುತ್ತಾರೆ ಇದು ತಪ್ಪು ಮಾಹಿತಿ. ಸ್ವಯತ್ತ ಸಂಸ್ಥೆಗಳು. ಯಾರ ಮೇಲೆ ಬೇಕಾದರೂ ತನಿಖೆ ನಡೆಸು ಅಧಿಕಾರವನ್ನು ಈ ಸಂಸ್ಥೆಗಳು ಹೊಂದಿವೆ. ಆ ಅಧಿಕಾರದ ಮೇಲೆ ತನಿಖೆ ನಡೆಸುತ್ತಿವೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲ. ಅಲ್ಲದೆ ಮೊದಲು ೫೦ ವರ್ಷ ಅಧಿಕಾರ ನಡೆಸಿದ ಕಾಂಗ್ರೇಸ್ ಸಾವಿರಾರು ಪ್ರಕರಣ ನಡೆಸಿದ್ದಾರೆ. ಹಾಗಾದರೆ ನೀವು ಕೂಡ ಈ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದ್ದಿರಾ ? ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.