ಮೈಸೂರು:- ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪ್ರಚಾರಕ್ಕೆ ತೆರಳಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಮೈಸೂರು ತಾಲೂಕಿನ ಸಿದ್ದರಾಮನಹುಂಡಿ ಗ್ರಾಮದಲ್ಲಿ ನಡೆದಿದೆ.
ಪೂರ್ವನಿಗದಿಯಂತೆ ಸಿದ್ದರಾಮನಹುಂಡಿ ಗ್ರಾಮ ಪ್ರವೇಶಿಸಿದ ಸೋಮಣ್ಣ ಅವರಿದ್ದ ವಾಹನ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಣ್ಣನ ಮನೆ ಸಮೀಪ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಬೆಂಬಲಿತ ಯುವಕರ ಗುಂಪೊಂದು ಸಿದ್ದರಾಮಯ್ಯ ಪರ ಘೋಷಣೆ ಕೂಗಿದೆ. ಈ ವೇಳೆ ಮತ್ತೊಂದು ಯುವಕರ ತಂಡ ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರ ಘೋಷಣೆ ಕೂಗಿದೆ.
ಈ ವೇಳೆ ಎರಡೂ ಗುಂಪುಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆಯಲ್ಲದೆ, ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರಿದೆ. ಈ ಸಂದರ್ಭ ಸಿದ್ದರಾಮಯ್ಯ ಅವರ ಅಣ್ಣನ ಕುಟುಂಬದವರು ಹಾಗೂ ಸಂಬಂಧಿಕರು ಎನ್ನಲಾದ ಕೆಲವರು ಗ್ರಾಮದ ನಾಗೇಶ್ ಎಂಬಾತನ ಮೇಲೆ ತೀವ್ರತರವಾದ ಹಲ್ಲೆ ಮಾಡಿದ್ದಾರೆ.
ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಕಂಡ ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಮಧ್ಯೆ ಪ್ರವೇಶಿಸಿ ಎರಡೂ ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ತಿಳಿಯಾಗಿಸಿದ್ದಾರೆ. ನಂತರ ಪೊಲೀಸ್ ಬಂದೋಬಸ್ತ್ ನಲ್ಲಿ ಬಿಜೆಪಿ ಪ್ರಚಾರ ವಾಹನ ಮುಂದೆ ಸಾಗಿದೆ.
ಘಟನೆಯಿಂದ ನಾಗೇಶ್ ಅವರ ಕಾಲು ಮುರಿದಿದೆ ಎಂದು ಹೇಳಲಾಗಿದ್ದು, ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಎರಡೂ ಕಡೆಯ ಪರಸ್ಪರ ದೂರು ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಬಿಜೆಪಿಯಿಂದ ಸೋಮಣ್ಣ ತೀವ್ರ ಪೈಪೋಟಿ ಒಡ್ಡಿದ್ದಾರೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ಸಿಗರು ಗಲಾಟೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.