ಬಾಗಲಕೋಟೆ: ಸಿನೀಮಿಯ ರೀತಿಯಲ್ಲಿ ಚೇಸ್ ಮಾಡುವ ಮೂಲಕ ಇಬ್ಬರು ಅಂತಾರಾಜ್ಯ ಕಳ್ಳರನ್ನು ಇಳಕಲ್ ಹಾಗೂ ಹುನಗುಂದ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಪರಾರಿ ಆಗಲು ಕಳ್ಳರು ಮಾಡಿದ ಎಲ್ಲಾ ಪ್ಲ್ಯಾನ್ ತಲೆಕೆಳಗಾಗಿದೆ. ಆಂಧ್ರಪ್ರದೇಶದ ಅನಂತಪುರದಲ್ಲಿ ಗ್ಯಾಸ್ ಕಟಟ್ನಿಂದ ಎಟಿಎಂನಲ್ಲಿದ್ದ ಹಣವನ್ನು ಕಳ್ಳರ ಗ್ಯಾಂಗ್ ದೋಚಿದ್ದರು. ಕಳ್ಳರು ಅನಂತಪುರದಿಂದ ಕರ್ನಾಟಕಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಇತ್ತು.
ಹುನಗುಂದ, ಇಳಕಲ್ ಎನ್ಹೆಚ್ 50ರಲ್ಲಿ ಹೋಗುವ ದೆಹಲಿ ಪಾಸಿಂಗ್ ವಾಹನ ತಪಾಸಣೆ ಮಾಡಲು ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಸೂಚಿಸಿದ್ದಾರೆ. ಅವರ ಆದೇಶದ ಮೇರಿಗೆ ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ಮಾಡಿದ ಪೊಲೀಸರು ಹುನಗುಂದ ಮಾರ್ಗವಾಗಿ ವಿಜಯಪುರಕ್ಕೆ ಹೋಗುವ ದಾರಿಯ ಬೆಳಗಲ್ ಚೆಕ್ ಪೋಸ್ಟ್ನಲ್ಲಿ ವಾಹನ ತಡೆದು ತಪಾಸಣೆ ಮಾಡಿದ್ದಾರೆ.
ಈ ವೇಳೆ ಅದೇ ಮಾರ್ಗದಲ್ಲಿ ಬಂದ ಕಳ್ಳರ ಗ್ಯಾಂಗ್ ಪೊಲೀಸರನ್ನು ಕಂಡು ಜಾಗೃತರಾಗಿ ವಾಹನ ಹಿಂತಿರುಗಿಸಿದ್ದಾರೆ. ಹುನಗುಂದ ಮಾರ್ಗದ ಧನ್ನೂರು-ಮುದ್ದೇಬಿಹಾಳದ ಅಡ್ಡದಾರಿ ಹಿಡಿದು ಪರಾರಿ ಆಗಲು ಯತ್ನಿಸಿದ್ದಾರೆ. ಅವರನ್ನು ಬೆನ್ನುಹತ್ತಿದ ಹೈವೇ ಪೊಲೀಸರು ಚೇಸ್ ಮಾಡಿದ್ದಾರೆ. ಈ ವೇಳೆ ಪೊಲೀಸ್ ವಾಹನಕ್ಕೆ ಕಳ್ಳರ ವಾಹನ ಡಿಕ್ಕಿ ಹೊಡೆದಿದೆ. ಹೀಗಾಗಿ ವಾಹನ ಬಿಟ್ಟು ಕಳ್ಳರು ಹೊಲದಲ್ಲಿ ಓಡಿ ಹೋಗಿದ್ದಾರೆ.
ಅತ್ತ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ನೆರವು ಪಡೆದ ಪೊಲೀಸ್ ಕಳ್ಳರು ಹೈವೇಗೆ ಬರುವಂತೆ ಮಾಡಿದ್ದಾರೆ. ಕಳ್ಳರು ಹೈವೆಗೆ ಬರ್ತಿದ್ದಂತೆ ಸುತ್ತುವರೆದು ಇಬ್ಬರು ಕಳ್ಳರನ್ನು ಪೊಲೀಸ್ ತಂಡ ಬಂಧಿಸಿದೆ. ಸದ್ಯ ಹುನಗುಂದ ಠಾಣೆಗೆ ಆಂಧ್ರ ಪೊಲೀಸರು ಆಗಮಿಸಿದ್ದು, ಕಳ್ಳರನ್ನ ಆಂಧ್ರಕ್ಕೆ ಕರೆದೊಯ್ಯಲಿದ್ದಾರೆ.