ಬೆಂಗಳೂರು:- ಸದನದಲ್ಲಿ ಅಗೌರವ ಹಾಗೂ ಅಶಿಸ್ತಿನಿಂದ ನಡೆದುಕೊಂಡ ಹಿನ್ನಲೆಯಲ್ಲಿ ಬಿಜೆಪಿಯ ಹತ್ತು ಮಂದಿ ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಯು.ಟಿ.ಖಾದರ್ ಆದೇಶ ಹೊರಡಿಸಿದ್ದಾರೆ.
ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರ ಮೇಲೆ ವಿಧೇಯಕದ ಕಾಪಿಗಳನ್ನ ಹರಿದು ಬಿಜೆಪಿ ಶಾಸಕರು ಎಸೆದು, ಸದನದಲ್ಲಿ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಸ್ವೀಕರ್ ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿ ಶಾಸಕರಾದ ಆರ್. ಅಶೋಕ್, ಡಾ. ಅಶ್ವಥ್ ನಾರಾಯಣ, ವಿ. ಸುನೀಲ್ ಕುಮಾರ್, ಅರವಿಂದ್ ಬೆಲ್ಲದ್, ವೇದವ್ಯಾಸ್ ಕಾಮತ್, ಯಶಪಾಲ್ ಸುವರ್ಣ, ಧೀರಜ್ ಮುನಿರಾಜ್, ಆರಗ ಜ್ಞಾನೇಂದ್ರ, ಭರತ್ ವೈ ಶೆಟ್ಟಿ, ಉಮಾನಾಥ್ ಕೋಟ್ಯಾನ್ ಅವರನ್ನ ಅಮಾನತು ಮಾಡಿ ಸ್ಪೀಕರ್ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಹಾಗೂ ನಡಾವಳಿ ನಿಯಮ 348 ಮೇರೆಗೆ ಅಮಾನತು ಮಾಡಲಾಗಿದೆ. ಈ ಪ್ರಸ್ತಾವಕ್ಕೆ ಸ್ಪೀಕರ್ ಖಾದರ್ ಅಂಗೀಕಾರ ನೀಡಿದರು ಹಾಗೂ ಸದಸ್ಯರನ್ನು ಸದನದಿಂದ ಹೊರಗೆ ಹೋಗುವಂತೆ ಸೂಚಿಸಿದರು.
ಇನ್ನೂ ಈ ವಿಚಾರವಾಗಿ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್, ರಾಜಕೀಯ ಅಸ್ತಿತ್ವಕ್ಕಾಗಿ ಗಲಾಟೆ ಮಾಡುವುದು ಸರಿಯಲ್ಲ. ಪೀಠದ ಗೌರವ ಉಳಿಸುವ ಕೆಲಸ ಆಗಬೇಕು. ಸದಸ್ಯರ ಮಾತುಗಳನ್ನು ಕೇಳಲು ನಾವು ಸಿದ್ದ. ಪೀಠಕ್ಕೆ ಅಗೌರವ ತೋರಿಸುವ ಮೂಲಕ ಕಪ್ಪು ಚುಕ್ಕೆ. ಮತದಾರರಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು. ರಾಜ್ಯದ ಜನರು ನಿಮ್ಮನ್ನು ಸಹಿಸುದಿಲ್ಲ ಎಂದರು.
ಇನ್ನೂ ಸ್ವೀಕರ್ ಯು ಟಿ ಖಾದರ್ ಅಮಾನತು ಆದೇಶವನ್ನ ಹೇಳಿದ ಬೆನ್ನಲೇ ಅಮಾನತುಗೊಂಡವರನ್ನು ಸದನದಿಂದ ಹೊರಕಳಿಸಲು ಮಾರ್ಷಲ್ಸ್ ಒಳಬಂದರು. ಅಷ್ಟರಲ್ಲಿ ಬಿಜೆಪಿಯ ಇತರ ಶಾಸಕರು ಅಮಾನತುಗೊಂಡ ಶಾಸಕರಿಗೆ ತಡೆಗೋಡೆಯಾಗಿ ನಿಂತರು. ಅಮಾನತುಗೊಂಡ ಶಾಸಕರನ್ನು ಮಾರ್ಷಲ್ಗಳು ಬಲವಂತವಾಗಿ ಹೊರಗೆ ಕಳುಹಿಸದಂತೆ ತಡೆಯಲು ಬಿಜೆಪಿಯ ಇತರ ಶಾಸಕರು ಪ್ರಯತ್ನಿಸಿದರು. ವೇದವ್ಯಾಸ ಕಾಮತ್ ಅವರನ್ನು ಸದನದಿಂದ ಮಾರ್ಷಲ್ ಗಳು ಹೊತ್ತೊಯ್ದರು.