ಬರ್ಫಿ ಎಲ್ಲರಿಗೂ ಇಷ್ಟವಾಗುವಂತಹ ಒಂದು ಪಾಕವಿಧಾನ. ನಾನಾ ಬರ್ಫಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಮನೆಯಲ್ಲಿ ಮಾಡುವ ಬರ್ಫಿಗೆ ತುಸು ರುಚಿ ಜಾಸ್ತಿ ಎಂದರೆ ತಪ್ಪಾಗಲ್ಲ. ಅದರಲ್ಲೂ ಹಾಲಿನ ಪುಡಿಯ ಬರ್ಫಿ ಒಮ್ಮೆ ಸವಿದರೆ, ಮತ್ತೆ ಮತ್ತೆ ಬೇಕೆನೆಸುವ ರುಚಿ. ಏಕೆಂದರೆ, ಹೆಚ್ಚಿನವರಿಗೆ ಹಾಲಿನಪುಡಿ ಎಂದರೆ ಅಚ್ಚುಮೆಚ್ಚು, ಅದನ್ನು ಹಾಗೆಯೇ ಸೇವಿಸುವವರೂ ಬಹಳಷ್ಟು ಮಂದಿ ಇದ್ದಾರೆ. ಇಂತಹ ಹಾಲಿನ ಪುಡಿಯಿಂದ ಆರೋಗ್ಯಕರ ಬರ್ಫಿ ತಯಾರಿಸಿದರೆ, ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ?.
ಈ ಹಾಲಿನಪುಡಿಯ ಬರ್ಫಿ ಬೇಕಾಗುವ ಪದಾರ್ಥಗಳು:
¼ ಕಪ್ ತುಪ್ಪ
¾ ಕಪ್ ಹಾಲು
2½ ಕಪ್ ಹಾಲಿನ ಪುಡಿ
½ ಕಪ್ ಸಕ್ಕರೆ
¼ ಟೀಸ್ಪೂನ್
ಏಲಕ್ಕಿ ಪುಡಿ
2 ಚಮಚ ಬಾದಾಮಿ (ಕತ್ತರಿಸಿದ)
2 ಚಮಚ ಪಿಸ್ತಾ (ಕತ್ತರಿಸಿದ)
ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ ¼ ಕಪ್ ತುಪ್ಪ ಮತ್ತು ¾ ಕಪ್ ಹಾಲು ಹಾಕಿ, ಇದಕ್ಕೆ 2½ ಕಪ್ ಹಾಲಿನ ಪುಡಿ, ½ ಕಪ್ ಸಕ್ಕರೆಯನ್ನು ಸೇರಿಸಿ. ಫ್ಲೇಮ್ ಕಡಿಮೆಯಲ್ಲಿರಲಿ.
ಎಲ್ಲವನ್ನೂ ಚೆನ್ನಾಗಿ ಯಾವುದೇ ಉಂಡೆಗಳಾಗದಂತೆ, ನಿರಂತರವಾಗಿ ಬೆರೆಸಿ. ಸ್ವಲ್ಪ ಸಮಯದ ಬಳಿಕ ಹಿಟ್ಟು ನಿರ್ಮಾಣವಾಗಿ, ಪ್ಯಾನ್ನಿಂದ ಬೇರ್ಪಡುತ್ತದೆ. ಈಗ ಇದಕ್ಕೆ ಟೀಸ್ಪೂನ್ ಏಲಕ್ಕಿ ಪುಡಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
ತಯಾರಾದ ಹಿಟ್ಟನ್ನು ಬೇಕಿಂಗ್ ಪೇಪರ್ ಹಾಕಿದ ಪ್ಲೇಟ್ಗೆ ವರ್ಗಾಯಿಸಿ, ಚೆನ್ನಾಗಿ ಹೊಂದಿಸಿ. ಈಗ ಸ್ವಲ್ಪ ಕತ್ತರಿಸಿದ ಬಾದಾಮಿ ಮತ್ತು ಪಿಸ್ತಾಗಳೊಂದಿಗೆ ಮೇಲ್ಭಾಗದಲ್ಲಿ ಹಾಕಿ, ಸ್ವಲ್ಪ ಒತ್ತಿರಿ. ಇದನ್ನು ೨ ಗಂಟೆಗಳ ಕಾಲ ಹಾಗೆಯೇ ಬಿಟ್ಟು, ನಂತರ ತುಂಡುಗಳಾಗಿ ಕತ್ತರಿಸಿ. ಈಗ ಹಾಲಿನ ಪುಡಿಯ ಬರ್ಫಿ ಸವಿಯಲು ಸಿದ್ಧ.