ನಮ್ಮ ನಡುವೆಯೇ ಇರುವ ಹಲವು ಗಿಡಗಳು, ಮೂಲಿಕೆಗಳು, ವಸ್ತುಗಳು ನಮ್ಮ ಅದೆಷ್ಟೋ ಕಾಯಿಲೆಗಳಿಗೆ ಔಷಧವಾಗಿರುತ್ತವೆ. ಆದರೆ ಈ ಬಗ್ಗೆ ನಮಗೆ ಗೊತ್ತಿಲ್ಲದೆ ನಾವು ನಿರ್ಲಕ್ಷ್ಯ ಮಾಡುತ್ತೇವೆ. ಅಂತಹ ಹಲವು ಸಸ್ಯಗಳ ಪೈಕಿ ನಾವಿಂದು ಈ ಗೋಳಿ ಸೊಪ್ಪಿನ ಕುರಿತು ಹೇಳುತ್ತೇವೆ ಕೇಳಿ.
ಗೋಳಿ ಸೊಪ್ಪು ಎಂಬ ಹೆಸರು ನೀವು ಸಹ ಕೇಳಿರಬಹುದು. ಬಹುತೇಕ ಹಳ್ಳಿ ಭಾಗದಲ್ಲಿ ಈ ಗಿಡಗಳು ಕಂಡುಬರುತ್ತದೆ. ಚಿಕ್ಕದಾಗಿ ನೆಲಸದ ಮೇಲೆ ಹರಡಿಕೊಂಡಿರುತ್ತದೆ. ಆದರೆ ಗೋಳಿ ಮರ ಎಂಬ ದೊಡ್ಡ ಗಾತ್ರದ ಮರವೂ ಇದೆ. ಆದರೆ ಅದಕ್ಕೂ ಇದಕ್ಕೂ ಅಜಗಜಾಂತರ ವ್ಯತ್ಯಾಸ.
ಈ ಗೋಳಿ ಸೊಪ್ಪು ಚಿಕ್ಕದಾಗಿ ನೆಲದಲ್ಲಿ ಹರಡಿರುತ್ತೆ. ಕೆಂಪು ಬಣ್ಣದ ಪೂವನ್ನೂ ಸಹ ಬಿಡುತ್ತದೆ. ಆದ್ರೆ ಬಹುತೇಕ ಇಂದು ಈ ಗಿಡ ಮನೆಯಲ್ಲಿದ್ದರು ಇದನ್ನು ಕೇವಲ ಹೂವಿನ ಗಿಡವಾಗಿ ಮಾತ್ರ ನೋಡಿರುತ್ತಾರೆ. ಆದರೆ ಇದರಲ್ಲಿ ಅಡಗಿರುವ ಔಷಧಿ ಗುಣಗಳ ಕುರಿತು ಅವರಿಗೆ ತಿಳಿದಿರುವುದಿಲ್ಲ.
ಈ ಗೋಳಿ ಸೊಪ್ಪನ್ನು ಪ್ರಾಚೀನ ಕಾಲದಿಂದಲೂ ಬಳಸಿರುವ ಉಲ್ಲೇಖ ಸಿಗುತ್ತದೆ. ಇದರ ವೈಜ್ಞಾನಿಕ ಹೆಸರು ಪೋರ್ಟುಲಾಕಾ ಒಲೆರೇಸಿಯಾ ಎಂದಾಗಿದೆ. ಈ ಸೊಪ್ಪಿನಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟ್ಯಾಶಿಯಂ ಸೇರಿ ಹಲವು ಅಂಶಗಳ ಒಳಗೊಂಡಿದೆ.
ಹಾಗಾದ್ರೆ ನಾವಿಂದು ಈ ಗೋಳಿ ಸೊಪ್ಪಿನ ಆರೋಗ್ಯಕರ ಅಂಶವೇನು? ಯಾವ ಔಷಧಿ ಗುಣ ಹೊಂದಿದೆ.? ಯಾವ ಸಮಸ್ಯೆಗೆ ಇದರಲ್ಲಿ ಪರಿಹಾರವಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮಧುಮೇಹಕ್ಕೆ ಇದೊಂದು ಮೂಲ ಔಷಧಿ: ಈ ಗಿಡದಲ್ಲಿ ಒಂದು ರೀತಿಯ ಸಾಸಿವೆಯಂತಹ ಬೀಜ ಸಿಗುತ್ತದೆ. ಗಿಡದಲ್ಲಿ ಹೂವು ಅರಳಿ ಹೋದ ಬಳಿಕ ಕಪ್ಪು ಬೀಜ ಸಿಗುತ್ತದೆ. ಇದನ್ನು ಪುಡಿ ಮಾಡಿ ಸೇವಿಸುವುದು ಅಥವಾ ಹಸಿ ಎಲೆಗಳನ್ನು ಸೇವಿಸುವುದು ನಿಮ್ಮ ಮಧುಮೇಹ ನಿಯಂತ್ರಣಕ್ಕೆ ಸಹಾಯಕವಾಗಲಿದೆ ಎಂದು ಹೇಳಲಾಗಿದೆ.
ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯ: ಇದರಲ್ಲಿ ಒಮೆಗಾ-3 ಹಾಗಾ ಫ್ಯಾಟಿ ಆಸಿಡ್ಸ್ ಅನ್ನು ಈ ಗಿಡ ಹೊಂದಿದ್ದು, ನಿಮ್ಮ ಹೃದಯದ ಆರೋಗ್ಯ ಸುಸ್ಥಿರದಲ್ಲಿಡಲು ಬಹಳ ಮುಖ್ಯವಾಗಿದೆ. ಈ ಗಿಡದ ಎಲೆಯನ್ನು ಬಿಸಿಲಿನಲ್ಲಿ ಒಣಗಿಸಿ, ಬಳಿಕ ಅದನ್ನು ಪುಡಿ ಮಾಡಿ ನೀರಿನೊಂದಿಗೆ ಬೆರೆಸಿ ಕುಡಿದರೆ ರಕ್ತ ಪರಿಚಲನೆ ಹಾಗೂ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ.
ಮೂಳೆಗಳ ಆರೋಗ್ಯಕ್ಕೆ ಅತ್ಯುತ್ತಮ: ಈ ಸೊಪ್ಪಿನಲ್ಲಿ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಅಂಶ ಅಧಿಕವಾಗಿದೆ. ಹೀಗಾಗಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದಾಗಿ ಮೂಳೆ ಸೆವೆತ, ಕೀಲು ನೋವು ಸೇರಿ ಮೂಳೆಗಳು ಬಲಶಾಲಿಯಾಗುತ್ತವೆ. ಇದರ ಜೊತೆಗೆ ಈ ಗೋಳಿ ಸೊಪ್ಪನ್ನು ಕೊಬ್ಬರಿ ಎಣ್ಣೆ ಜೊತೆ ಅರಿದು ಹಸಿ ಗಾಯಕ್ಕೆ ಹಚ್ಚಿದರೆ ರಕ್ತ ಸುರಿಯುವುದು ತಕ್ಷಣ ನಿಲ್ಲುತ್ತದೆ.
ಈ ಗೋಳಿ ಸೊಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ ಬಳಿಕ ಅದಕ್ಕೆ ಎರಡು ಕಾಳು ಮೆಣಸು, ಶುಂಠಿ ಹಾಕಿ ಕಷಾಯ ಮಾಡಿ ಸೇವಿಸಿದರೆ ವಾಂತಿಯಾಗುವುದು, ಭೇದಿ, ಜೀರ್ಣಕ್ರಿಯೆಯ ಸಮಸ್ಯೆಗಳು ದೂರಾಗಲಿದೆ.