ಮಂಡ್ಯ: ಸಾರ್ವಜನಿಕರ ಹಿತದೃಷ್ಠಿಯಿಂದ ನಗರದೊಳಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಲು ಹಲವು ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ಪಿ.ರವಿಕುಮಾರ್ ಗಾಣಿಗ ತಿಳಿಸಿದರು. ಪೊಲೀಸ್ ಇಲಾಖೆ, ನಗರಸಭೆ ಅಧಿಕಾರಿಗಳು, ಸಾರಿಗೆ ಅಧಿಕಾರಿಗಳೊಂದಿಗೆ ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹದಗೆಟ್ಟಿರುವ ಸಂಚಾರ ವ್ಯವಸ್ಥೆಯನ್ನು ಸುವ್ಯವಸ್ಥೆಗೆ ತರುವುದಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವುದು ಅನಿವಾರ್ಯವಾಗಿದೆ ಎಂದರು.
ನಾಳೆಯಿಂದ ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸುವುದಿಲ್ಲ. ಬದಲಿಗೆ ಅವರು ಹೆಲ್ಮೆಟ್ ಖರೀದಿಸುವವರೆಗೆ ವಾಹನವನ್ನು ವಶದಲ್ಲಿಟ್ಟುಕೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೆಲ್ಮೆಟ್ ರಹಿತ ಚಾಲನೆಗೆ ದಂಡವಿಲ್ಲ
ಹೆಲ್ಮೆಟ್ ಬಗ್ಗೆ ಜಾಗೃತಿಯನ್ನು ಹಲವಾರು ವರ್ಷಗಳಿಂದ ಮೂಡಿಸಲಾಗಿದೆ. ಇನ್ನು ಮುಂದೆ ಹೆಲ್ಮೆಟ್ ಧರಿಸದೆ ಸಂಚರಿಸಿದಲ್ಲಿ ದಂಡ ವಿಧಿಸದೆ ಹೆಲ್ಮೆಟ್ ಖರೀದಿಸುವವರೆಗೆ ವಾಹನವನ್ನು ವಶದಲ್ಲಿಟ್ಟುಕೊಳ್ಳಲಾಗುವುದು. ಸಾರ್ವಜನಿಕರ ಸುರಕ್ಷತೆ ದೃಷ್ಠಿಯಿಂದ ಎಲ್ಲರೂ ಹೆಲ್ಮೆಟ್ ಧರಿಸಬೇಕು. ಯಾವುದೇ ಶಿಫಾರಸ್ಸುಗಳಿಗೂ ಮಣಿಯುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದವರಿಗೆ ಆರಂಭದಲ್ಲಿ ಎಚ್ಚರಿಕೆ ನೀಡಲಾಗುವುದು. ಅವರಿಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂದ ರವಿಕುಮಾರ್ ಅವರು, ಕುಟುಂಬದವರು ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಕಾರನ್ನು ನಿಲ್ಲಿಸಿ, ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗುವುದು ಎಂದು ಹೇಳಿದರು.
ಸಿಸಿ ಟಿವಿ ಕಣ್ಗಾವಲಿನಲ್ಲಿ ನಗರ
ನಗರದೊಳಗೆ ಪ್ರಸ್ತುತ 16 ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದು, ಉಳಿದಂತೆ ನಗರದೊಳಗೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದರ ಮೂಲಕ ಅಪರಾಧಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಅವುಗಳ ನಿರ್ವಹಣೆಯನ್ನು ಪೊಲೀಸ್ ಇಲಾಖೆ ಮತ್ತು ನಗರಸಭೆ ಮಾಡುತ್ತವೆ ಎಂದು ವಿವರಿಸಿದರು.
ಮುಲಾಜಿಲ್ಲದೆ ಪ್ರಕರಣ ದಾಖಲು
ಸಾರಿಗೆ ಇಲಾಖೆ ಬಸ್ಗಳನ್ನು ಎಲ್ಲೆಂದರಲ್ಲಿ ನಿಯಮಬಾಹಿರವಾಗಿ ನಿಲುಗಡೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಮುಂದುವರಿದಲ್ಲಿ ಯಾವುದೇ ಮುಲಾಜಿಲ್ಲದೆ ಚಾಲಕರ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
2.20 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ