ಮಂಡ್ಯ: ವಿವಿಧ ಮಾನವ ಸಂಪನ್ಮೂಲ ಹಾಗೂ ಸೇವೆಗಳ ಹೆಸರಿನಲ್ಲಿ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಹೊಡೆಯಲಾಗುತ್ತಿದೆ.ಇದಕ್ಕಾಗಿ ನಿಯಮಬಾಹಿರ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಈ ಮೂಲಕ ಮಿಮ್ಸ್ ಆರೋಗ್ಯ ಸೇವೆಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂದು ಕರುನಾಡ ಸೇವಕರು ಕನ್ನಡಪರ ಸಂಘಟನೆಗಳ ಒಕ್ಕೂಟದ ಮೈಸೂರು ವಿಭಾಗದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೆಡಿಕಲ್ ಕಾಲೇಜಿಗೆ ಹೊರಗುತ್ತಿಗೆ ಆಧಾರದಲ್ಲಿ ಭದ್ರತಾ ಸೇವೆ ಟೆಂಡರ್ ಪಡೆದ ಕೆಎಸ್ಎಫ್-೯ ಎಂಬ ಏಜೆನ್ಸಿಯ ದಾಖಲೆಗಳು ಮತ್ತು ಮಿಮ್ಸ್ ನಲ್ಲಿ ಸಿ ಮತ್ತು ಡಿ ದರ್ಜೆ ಹೊರಗುತ್ತಿಗೆ ನೌಕರರನ್ನು ಪೂರೈಸುವ ಆರ್ ಅಂಡ್ ಆರ್ ಮ್ಯಾನ್ ಪವರ್ ಏಜೆನ್ಸಿಯ ದಾಖಲೆಗಳು ಕ್ರಮಬದ್ಧವಾಗಿಲ್ಲದಿರುವ ಬಗ್ಗೆ ಈ ಹಿಂದೆಯೇ ನಿರ್ದೇಶಕರಿಗೆ ದೂರು ನೀಡಲಾಗಿದ್ದರೂ ಕ್ರಮ ಕೈಗೊಂಡಿರಲಿಲ್ಲ ಎಂದರು.
ಈಗ ಏಜೆನ್ಸಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಸಲ್ಲಿಸಿದ್ದ ಸೇವಾ ಪ್ರಮಾಣ ಪತ್ರ ನಕಲಿ ಎಂದು ರುಜುವಾತಾಗಿದೆ.ಇದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ. ಈ ನಕಲಿ ಪ್ರಮಾಣಪತ್ರವನ್ನು ನಿಯಮಬಾಹಿರವಾಗಿ ಅಂಗೀಕರಿಸಿದ ಮಿಮ್ಸ್ ನಿರ್ದೇಶಕರು ಹಾಗೂ ಆಡಳಿತಾಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ಏಜೆನ್ಸಿಯ ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಳ್ಳ
ಬೇಕೆಂದು ಆಗ್ರಹಿಸಿದರು.
ಆಯುಷ್ಮಾನ್ ಭಾರತ್ ಯೋಜನೆಯಲ್ಲೂ ಅವ್ಯವಹಾರ:
ಆಯುಷ್ಮಾನ್ ಭಾರತ್ ಯೋಜನೆಯ ನಿರ್ವಹಣೆಯ ಹೊಣೆಯನ್ನು ಮಿಮ್ಸ್ ವತಿಯಿಂದ ಈವರೆಗೆ ನಿರ್ವಹಿಸಲಾಗುತ್ತಿತ್ತು.ಈಗ ಖಾಸಗಿಯ ‘ಟೈಪ್ವೆಲ್’ ಎಂಬ ಏಜೆನ್ಸಿಗೆ ಕೇವಲ ಕೋಟೆಷನ್ ಆಧಾರದಲ್ಲಿ ನೀಡಿ ಲಕ್ಷಾಂತರ ರೂಪಾಯಿ ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಆಪಾದಿಸಿದರು.
ಪ್ರಯೋಗಾಲಯ ಖಾಸಗಿಗೆ:
ಇದಲ್ಲದೆ, ಆಸ್ಪತ್ರೆಯ ಕೇಂದ್ರ ಪ್ರಯೋಗಾಲಯದಲ್ಲಿ ವಿವಿಧ ರೋಗ ಪರೀಕ್ಷೆಗಳನ್ನು ಮಿಮ್ಸ್ ವತಿಯಿಂದ ಮಾಸಿಕ ೨೦ ಲಕ್ಷ ವೆಚ್ಚದಂತೆ ವಾರ್ಷಿಕ ೨.೫ ಕೋಟಿಗೆ ನಿರ್ವಹಿಸಲಾಗುತ್ತಿತ್ತು.ಈಗ ರೋಗ ಪರೀಕ್ಷೆ ಪ್ರಕ್ರಿಯೆಯನ್ನು ಖಾಸಗಿ ಏಜೆನ್ಸಿಗೆ ಹೊರಗುತ್ತಿಗೆ ನೀಡಿ ಮಾಸಿಕ ೫೯ ಲಕ್ಷದಂತೆ ವಾರ್ಷಿಕ ೭ ಕೋಟಿ ನೀಡಲಾಗುತ್ತಿದೆ. ಹೆಸರಿಗಷ್ಟೇ ಸರಕಾರಿ ಆಸ್ಪತ್ರೆ ಎಂದು ಹೇಳಿ ಇಡೀ ಕಾಲೇಜು ಆಸ್ಪತ್ರೆಯನ್ನು ಖಾಸಗಿಯವರ ವಶಕ್ಕೆ ನೀಡಲಾಗುತ್ತಿದೆ.ಈಗ ಬಳಕೆಯಾಗುತ್ತಿರುವ ಅರ್ಧದಷ್ಟು ಹಣದಲ್ಲಿ ಆಸ್ಪತ್ರೆ ನಿರ್ವಹಣೆ ಮಾಡಬಹುದಾಗಿದ್ದು ಸಾರ್ವಜನಿಕ ಹಣ ದೋಚುವ ಸಲುವಾಗಿ ಈ ರೀತಿಯ ಕುತಂತ್ರಗಳನ್ನು ರೂಪಿಸಲಾಗಿದೆ.ಇದರ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಧ್ವನಿ ಎತ್ತಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ್, ವಕೀಲ ರಾಮಯ್ಯ, ಸಂಘಟನೆಯ ಚನ್ನಕೇಶವ ಹಾಗೂ ಶಿವರಾಜು ಹಾಜರಿದ್ದರು.