ಬೆಂಗಳೂರು:- ಅತೀ ಕಡಿಮೆ ಬೆಲೆಯಲ್ಲಿ ಬಡವರಿಗೆ, ಶ್ರಮಿಕರಿಗೆ, ಆಟೋ-ಟ್ಯಾಕ್ಸಿ ಚಾಲಕರಿಗೆ ಊಟ-ತಿಂಡಿ ಒದಗಿಸುವ ಇಂದಿರಾ ಕ್ಯಾಂಟೀನ್ಗಳಿಗೆ ಕಾಂಗ್ರೆಸ್ ಸರ್ಕಾರ ಮರುಜೀವನ ನೀಡುವ ಯೋಜನೆಗಳು ಅಂತಿಮಗೊಂಡಿವೆ. ಹೊಸ ಮೆನೂ ಮತ್ತು ಹೊಸ ರೂಪದಲ್ಲಿ ನೂರಾರು ಹೊಸ ಇಂದಿರಾ ಕ್ಯಾಂಟಿನ್ ಬೆಂಗಳೂರಿನಲ್ಲಿ ಹಸಿದವರನ್ನು ಆಕರ್ಷಿಸಲಿವೆ.
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡಿಗೆ ಒಂದರಂತೆ 250 ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲಾಗುವುದು. ಇಂದಿರಾ ಕ್ಯಾಂಟೀನ್ಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುವುದು. ಹೊಸದಾಗಿ ವಲಯವಾರು ಟೆಂಡರ್ ಕರೆಯಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಸೋಮವಾರ ಇಂದಿರಾ ಕ್ಯಾಂಟೀನ್ ಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಇಂದಿರಾ ಕ್ಯಾಂಟಿನ್ ಗೆ ಬಿಬಿಎಂಪಿ ವತಿಯಿಂದ ಶೇಕಡಾ 70ರಷ್ಟು ಹಾಗೂ ಸರ್ಕಾರದಿಂದ ಶೇಕಡಾ 30 ರಷ್ಟು ವೆಚ್ಚ ಭರಿಸಲಾಗುತ್ತಿತ್ತು. ಆದರೆ ಈಗ ಬಿಬಿಎಂಪಿಯು ಶೇಕಡಾ 50 ರಷ್ಟು ಹಾಗೂ ರಾಜ್ಯ ಸರ್ಕಾರ ಶೇಕಡಾ 50ರಷ್ಟು ವೆಚ್ಚ ಭರಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಹೊರತು ಪಡಿಸಿ ರಾಜ್ಯದ ವಿವಿಧೆಡೆಗಳಲ್ಲಿ ಇಂದಿರಾ ಕ್ಯಾಂಟೀನ್ ವೆಚ್ಚದಲ್ಲಿ ಸರ್ಕಾರ ಶೇಕಡಾ 70ರಷ್ಟು ಹಾಗೂ ಸ್ಥಳೀಯ ನಗರ ಸಭೆಗಳು ಶೇಕಡಾ 30 ರಷ್ಟು ಭರಿಸಬೇಕು ಎಂದು ನೀರ್ಧರಿಸಲಾಗಿದೆ.
ರಾಜ್ಯದ ಯಾವೆಲ್ಲ ಸ್ಥಳಗಳಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕೆನ್ನುವ ಸ್ಥಳಗಳ ಪಟ್ಟಿ ನೀಡಲು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ನಿರ್ದೇಶಿಸಿದರು. ಆದಷ್ಟು ಶೀಘ್ರವೇ ಪಟ್ಟಿ ನೀಡಬೇಕೆಂದರು.
ಬಡವರಿಗೆ ಕಡಿಮೆ ಬೆಲೆಯಲ್ಲಿ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ಗಳು ನಿರ್ಲಕ್ಷ್ಯಕ್ಕೆ ಒಳಪಟ್ಟಿದ್ದವು. ಕೆಲವು ಸ್ಥಗಿತಗೊಂಡಿದ್ದವು. ಅವೆಲ್ಲವುಗಳಿಗೆ ಹೊಸ ರೂಪ ಸಿಗಲಿದೆ. ಕ್ಯಾಂಟೀನ್ನ ಆಹಾರ ದರದಲ್ಲಿ ಏರಿಕೆ ಆಗಲಿದೆ ಎಂಬ ಮಾತುಗಳು ಇದ್ದವು. ಆದರೆ ಹಳೆಯ ದರದಲ್ಲಿಯೇ ಊಟ ತಿಂಡಿ ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಆಹಾರ ಕ್ರಮದಲ್ಲಿ ಬದಲಾವಣೆ
ಇಂದಿರಾ ಕ್ಯಾಂಟೀನ್ ನಲ್ಲಿ ದೊರೆಯುವ ಆಹಾರದ ಕ್ರಮವನ್ನು ಬದಲಾಯಿಸಲು ನೀರ್ಧರಿಸಲಾಗಿದೆ. ಕ್ಯಾಂಟೀನ್ ಆಹಾರದ ಗುಣಮಟ್ಟ, ಪ್ರಮಾಣ ಹಾಗೂ ಶುಚಿತ್ವ ಕಾಪಾಡಲು ಸೂಚಿಸಲಾಗಿದೆ ಎಂದರು. ಇಂದಿರಾ ಕ್ಯಾಂಟಿನ್ ಜೊತೆಗೆ ಮೊಬೈಲ್ ಕ್ಯಾಂಟೀನ್ ಸಹ ಶುರುವಾಗಲಿವೆ.
ಇಂದಿರಾ ಕ್ಯಾಂಟೀನ್ ಮೆನೂ ನೋಡುವುದಾದರೆ ಬೆಳಗ್ಗೆ ತಿಂಡಿಗೆ 2 ಇಡ್ಲಿ 1 ವಡೆ, ಉಪ್ಪಿಟ್ಟು ಜತೆ ಕೇಸರಿಬಾತ್, ಬಿಸಿಬೇಳೆ ಬಾತ್, ಪೂಳಿಯೋಗೆರೆ, ಟೋಮ್ಯಾಟೋ ಬಾತ್, ಚಿತ್ರಾನ್ನ , ವಾಂಗಿಬಾತ್, ರೈಸ್ ಬಾತ್ ಇರಲಿದ್ದು, ಮಧ್ಯಾಹ್ನ ಊಟಕ್ಕೆ – ಸಿಂಗಲ್ ಚಪಾತಿ, ಒಂದು ವೆಜ್ ಪಲ್ಯಾ, ಕಪ್ ವೈಟ್ ರೈಸ್, ಸಾಂಬಾರ್ ಹಾಗೂ ರಸಂ ಮುದ್ದೆ, ವೆಜ್ ಪಲ್ಯಾ. ಇನ್ನು ವಾರದಲ್ಲಿ ಮೂರು ದಿನ ಮಧ್ಯಾಹ್ನ ಸ್ವೀಟ್ , ಹೋಳಿಗೆ, ಅಕ್ಕಿಪಾಯಸ, ಕೇಸರಿ ಬಾತ್, ರಾತ್ರಿ ಅನ್ನ ಸಾಂಬಾರ್ ಸಿಗಲಿದೆ.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಇಂದಿರಾ ಚಾಲ್ತಿಯಲ್ಲಿದ್ದ 185 ಕ್ಯಾಂಟೀನ್ಗೆ ನೀಡುತ್ತಿದ್ದ ಅನುದಾನ ಸ್ಥಗಿತಗೊಳಿಸಿತ್ತು. ಈ ಮೂಲಕ ನಿರ್ಲಕ್ಷ್ಯ ವಹಿಸಿತ್ತು. ಇದರಿಂದಾಗಿ 172 ಕ್ಯಾಂಟಿನ್ಗಳು ಮಾತ್ರ ಕಾರ್ಯ ನಿರ್ವಹಿಸುವಂತಾಯಿತು. ಇದೀಗ ಎಲ್ಲ ಕ್ಯಾಂಟೀನ್ಗಳಿಗೆ ಮರುಚಾಲನೆ ಸಿಗುತ್ತಿದೆ.