ವಿಜಯಪುರ: ಚಹಾ ಮಾರುವವ ಪ್ರಧಾನಿಯಾಗುತ್ತಾನೆ ಎಂದು ಈ ಹಿಂದೆ ಭವಿಷ್ಯ ನುಡಿದು ಪ್ರಸಿದ್ಧಿಗೆ ಬಂದಿದ್ದ ವಿಜಯಪುರ ಜಿಲ್ಲೆಯ ಕತ್ನಳ್ಳಿ ಶ್ರೀ ಸದಾಶಿವ ಮುತ್ಯಾ ಮಠಾಧೀಶ ಶ್ರೀ ಶಿವಯ್ಯ ಸ್ವಾಮೀಜಿ ಇದೀಗ ಕೊರೊನಾ ಬಳಿಕ ವೈದ್ಯರಿಗೆ ತಲೆನೋವು ತರುವ ಮತ್ತೊಂದು ರೋಗಬಾಧೆ ಜನರನ್ನು ಕಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ ಇದು ಕೊರೊನಾದಷ್ಟು ಮಾರಕವಾಗಿರಲ್ಲ ಎಂದು ಸಮಾಧಾನಕರ ಸಂಗತಿಯನ್ನು ತಿಳಿಸಿದ್ದಾರೆ. ಇನ್ನು ರಾಜಕೀಯಕ್ಕೆ ಸಂಬಂಧಿಸಿ ಭಾರತ ಬೇರೆ ದೇಶವನ್ನು ಆಳಲಿದೆ ಎಂದು ತಿಳಿಸಿರುವುದು ಬಹಳ ವಿಶೇಷ ಮತ್ತು ಕುತೂಹಲಕಾರಿ ಸಂಗತಿಯಾಗಿದೆ.
ಸುಕ್ಷೇತ್ರ ಕತ್ನಳ್ಳಿಯಲ್ಲಿ ಯುಗಾದಿ ಅಂಗವಾಗಿ ಶ್ರೀ ಸದಾಶಿವ ಮುತ್ಯಾನ ಜಾತ್ರೆಯ ಅಂಗವಾಗಿ ನಡೆದ ಸಾಮೂಹಿಕ ವಿವಾಹದ ಬಳಿಕ ಪ್ರತಿವರ್ಷದಂತೆ ಈ ವರ್ಷವೂ ವರ್ಷದ ಭವಿಷ್ಯ ನುಡಿದ ಅವರು, ಹೊಸ ರೋಗದ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಡಾಕ್ಟರಿಗೆ ಹುಚ್ಚು ಹಿಡಿಸತೈತಿ!
ಪ್ರಾಣಿ ಪಕ್ಷಿಗಳಿಗೆ ರೋಗಾದಿಗಳು ಬಹಳ ಇವೆ. ಮನುಷ್ಯನಿಗೆ ಹಿಂದೆ ಕೊರೊನಾ ಬಂದು ಹೋಗಿದೆ. ಇನ್ನೊಂದು ರೋಗ ಬರ್ತೇತಿ. ಅದು ಹೆಂಗ ಬರ್ತೈತಿ ಅಂದ್ರ ಅದು ಚೀಜ್ ಐತಿ. ಕೊರೊನಾದಂಗ ಗಸಕ್ಕನೆ ಒಯ್ಯಾಂಗಿಲ್ಲ. ಆದರೆ ಡಾಕ್ಚರನ ಹುಚ್ಚ ಹಿಡಸತೈತಿ. ಆ ರೋಗ ಬಂದವನ ಹುಚ್ಚು ಹಿಡಸತೈತಿ.
ತಾಯಿಗೆ ಮೂರು ಮಂದಿ ಮಕ್ಕಳು ಇರ್ತಾರ. ಆ ಮೂರು ಜನ ಮಕ್ಕಳಲ್ಲಿ ಒಬ್ಬ ಥಂಡಿ ಹತ್ತಲಿಕತ್ತೈತಿ ಅಂತಾನ. ಅಂದ್ರ ಚಳಿಜ್ವರ ಬಂದಾವು ಅಂತೈತಿ. ಒಬ್ಬ ಹುಡುಗನಿಗೆ ಕೆಟ್ಟ ಸಂಕಟ ಆಗಾಕತ್ತೈತಿ ಅಂತೈತಿ. ಉರುಪ ಬಿದ್ದೈತಿ. ಚಳಿಜ್ವರ ಬಂದ ಹುಡುಗ ನನಗ ಬಿಸಿ ಬಿಸಿ ಏನಾದರೂ ಕೊಡು ಅಂತೈತಿ. ಇನ್ನೊಂದು ಹುಡುಗ ನನಗ ಕೆಟ್ಟ ಕಾವು ಆಗಾಕತ್ತೈತಿ. ನನಗೆ ಏನರೆ ಕೊಡು ಅಂತೈತಿ. ಟೈಪೈಡ್ ಆಗಿದೆ ಅದಕ್ಕೆ.
ಮತ್ತೊಂದು ಹುಡುಗ ನನಗೆ ಕುಡಿಯಲು ಏನಾದರೂ ಕಾಡಾ(ಕಷಾಯ) ಕೊಡು ಅಂತೈತಿ. ಹೀಗಾಗಿ ತಾಯಿಗೆ ಹುಚ್ಚು ಹಿಡಿದಂತೆ ಮನುಷ್ಯನಲ್ಲಿ ವಾತ, ಪಿತ, ಕಫ ಎಂದು ಮೂರು ಮಕ್ಕಳಿವೆ. ಇವುಗಳಲ್ಲಿ ಒಂದಕ್ಕೆ ಏನಾದರೂ ರೋಗ ಬಂದರೆ ಮನುಷ್ಯನಾಗಲಿ, ವೈದ್ಯನಾಗಲಿ ಏನಾದರೂ ಚಿಕಿತ್ಸೆ ಕೊಡಬಹುದು.
ಆದರೆ ಮೂರಕ್ಕೂ ಜಡ್ಡು ಬರತೈತಿ. ಒಂದನ್ನು ಕಡಿಮೆ ಮಾಡಿದರೆ ಇನ್ನೋಂದು ಹೆಚ್ಚಾಗುತ್ತದೆ. ಒಂದನ್ನು ಕಡಿಮೆ ಮಾಡಿದರೆ ಮತ್ತೋಂದು ಹೆಚ್ಚಾಗುತ್ತದೆ. ಈ ಮೂರನ್ನೂ ಬ್ಯಾಲೆನ್ಸ್ ಮಾಡಿಕೊಂಡು ಚಿಕಿತ್ಸೆ ನೀಡುವ ವೈದ್ಯ ಸಿಕ್ಕರೆ ರೋಗಿ ಗುಣಮುಖನಾಗುತ್ತಾನೆ. ಭಯಪಡಬ್ಯಾಡ್ರಿ. ಸಕಲ ವ್ಯಾದಿಗಳಿಗೂ ಸದಾಶಿವನ ಬೂದಿಯೇ ದಿವ್ಯೌಷಧಿ ಎಂದು ಶ್ರೀಗಳು ತಿಳಿಸಿದರು.
ರಾಜಕೀಯ ಭವಿಷ್ಯ
ಚಹಾ ಮಾರುವವ ಪ್ರಧಾನಿಯಾಗುತ್ತಾನೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದ ಇದೇ ಶ್ರೀಗಳು, ಈ ಬಾರಿಯ ರಾಜಕೀಯದ ಬಗ್ಗೆ ಯಾವುದೇ ಸ್ಪಷ್ಟ ಭವಿಷ್ಯ ನುಡಿಯದೇ, ಮುಂದಿನ ತಿಂಗಳು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿಯಲ್ಲಿ ನಡೆಯಲಿರುವ ಹೇಳಿಕೆ ಕಾರ್ಯಕ್ರಮದಲ್ಲಿ ಆ ಬಗ್ಗೆ ಸ್ಪಷ್ಟ ಭವಿಷ್ಯ ಹೇಳುವುದಾಗಿ ತಿಳಿಸಿದರು.
ರಾಜಕೀಯದಲ್ಲಿ ನನಗಿಂತಲೂ ನೀವು ಬಹಳ ಶ್ಯಾಣೆ ಅದೀರಿ. ಸದ್ದಿಲ್ಲದ್ದು, ಸುದ್ದ್ಯಾಗಿದ್ದದ್ದು, ನಿದ್ಯಾಗಿದ್ದಿದ್ದು, ಗುದ್ಯಾಗಿದ್ದಿದ್ದು ಇದು ನಾಲ್ಕರದೊಳಗೆ ರ ಜೊತೆ ಮತ್ತೊಂದು ಎದ್ದು ನಿಂದರಾಕತ್ತೈತಿ. ಅದು ಯಾವುದನ್ನು ಹಿಡಕೊಂಡು ಎದ್ದು ನಿಲ್ಲತೈತಿ ಎಂಬುದು ಅದು ಫೈನ್ ಆಗೂದು ಚಮಕೇರಿಯಲ್ಲಿ ಹೇಳ್ತಿನಿ. ಈಗ ಬರೀ ಗದ್ದಲ ನಡಿದೈತಿ ಎಂದು ಅವರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಾರ್ಮಿಕವಾಗಿ ಹೇಳಿದರು.
ಮಳೆ ಬೆಳೆ ಭವಿಷ್ಯ
ಈ ವರ್ಷದ ಮಳೆ ಮತ್ತು ಬೆಳೆಯ ಕುರಿತು ಭವಿಷ್ಯ ನುಡಿದ ಶ್ರೀ ಶಿವಯ್ಯ ಸ್ವಾಮೀಜಿ, ಮಳೆಗಾಲ ಮೂರು ಭಾಗ ಆಗಿ ಒಡದೈತಿ. ಒಂದನೇಯದವ, ಎರಡನೇಯದವ, ಮೂರನೇಯದವ. ಒಂದನೇಯದವ ಮೂರನೇದವನಿಗೆ ಬೆನ್ನ ಹತ್ಯಾನ. ಎರಡನೇಯವನ ಮೂರನೇದವನಿಗೆ ಬಾ ಅನ್ನಾಕತ್ತಾನ್, ಒಬ್ಬರಿಗೊಬ್ಬರು ಕರ್ಯಾಕತ್ತಾರ. ನನಕೂಡಾ ಬಾ ಎಂದು ಪರಸ್ಪರ ಕರಾಯಕತ್ತಾರ. ಹೀಂಗಾಗಿ ನ್ಯಾಯ ಪಂಚಾಯಿತಿ ನಡದೈತಿ. ಈ ನ್ಯಾಯ ನಿಖಾಲಿ ಆಗಬೇಕ ಅಂದ್ರ ಅದನ್ನು ಇಲ್ಲಿ ಹೇಳಲ್ಲ ಚಮಕೇರಿ ಜಾತ್ರ್ಯಾಗ ಹೇಳ್ತೀನಿ. ಅಲ್ಲೇ ಫೈನಲ್ ಆಗ್ತದ ಎಂದು ಅವರು ಹೇಳಿದರು.
ಭಾರತ ಪ್ರೀತಿಯಿಂದ ಬೇರೆ ದೇಶ ಆಳುವ ಕಾಲ ಬರೂದೈತಿ
ಒಂದು ಸೂತ್ರ ಬರೂದೈತಿ. ಅದು ಬರದಂಗ ತೊಂದರೆ ಪಡಸಾಕತ್ತಾರ. ಆ ಸೂತ್ರ ಬಂತು ಅಂದ್ರ ಭಾರತ ವಿಶ್ವದೊಳಗ ನಂಬರ್ ಒನ್ ಆಗತೈತಿ. ಬೇರೆ ದೇಶವನ್ನು ಆಳ್ತೈತಿ. ಈ ವರ್ಷ ಭಾಳ ಚಿತ್ರ-ವಿಚಿತ್ರ. ಈ ಚಿತ್ರ ವಿಚಿತ್ರನ್ಯಾಗ ಸಚಿತ್ರವಾಗಿ ಬದುಕಬೇಕು ಅಂದ್ರ ಸದಾಶಿವನ ಧ್ಯಾನ ಮಾಡ್ರೀ ಎಂದು ಅವರು ಹೇಳಿದರು.
ಪ್ರಾಣಿಗಿಂತಲೂ ಮನುಷ್ಯನ ಬೆಲೆ ಆಗ್ತೈತಿ
ಆನಿ ಬೆಲೆ ಎತ್ತಿಗೆ, ಎತ್ತಿನ ಬೆಲೆ ಕುರಿಗೆ, ಕುರಿ ಬೆಲೆ ಕೋಳಿಗೆ, ಕೋಳಿ ಬೆಲೆ ಮನುಷ್ಯನಿಗೆ. ಹಿಂಗ ಮನುಷ್ಯನ ಬೆಲೆ ಕೋಳಿಗಿಂತ ಕಡೆ ಆಗಲಿದೆ ಎಂದು ಶ್ರೀ ಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದರು.
ಹೇಳಿಕೆ ನೀಡಿದ ಬಳಿಕ ಕಾರ್ಣಿಕ, ಮುಂದೆ ಕುಳಿತಿದ್ದ ಐದು ಜನ ಭಕ್ತರಿಗೆ ಪ್ರಸಾದ ಬಡಿಸಿದರು. ಇದಕ್ಕೂ ಮುನ್ನ ವಾದ್ಯ ಮೇಳದೊಂದಿಗೆ ಶ್ರೀಗಳನ್ನು ಹೇಳಿಕೆ ಹೇಳುವ ಸ್ಥಳಕ್ಕೆ ಕರೆದು ತರಲಾಯಿತು. ಉದ್ಯಮಿ ಬಾಬುಗೌಡ ಬಿರಾದಾರ ಶ್ರೀಗಳ ಪಾದಪೂಜೆ ನೆರವೇರಿಸಿದರು.