ಹಾಸನ: ವಯಸ್ಸಾದ ೮೫ ವರ್ಷದ ವೃದ್ಧೆಯನ್ನು ಡ್ರಾಪ್ ಮಾಡಲು ಮುಂದಾಗಿ ದಾರಿ ಮಧ್ಯೆ ನಿಲ್ಲಿಸಿ ಆಕೆ ಮೇಲೆ ದೌರ್ಜನ್ಯ ಎಸಗಿದಲ್ಲದೇ ಆಕೆಯ ಮೇಲೆ ಕಲ್ಲನ್ನು ಎತ್ತಿಹಾಕಿ ಹತ್ಯೆಗೈದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಕಾರ್ಯಚರನೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಅರಸೀಕೆರೆ ತಾಲ್ಲೂಕು, ಕಣಕಟ್ಟೆ ಹೋಬಳಿ, ಮಾಡಾಳು ಗ್ರಾಮದ ವಾಸಿ ಗೌರಮ್ಮ ೮೫ ವರ್ಷ ಎಂಬುವರೇ ಕಾಮುಕ ಮಿಥುನ್ ಕುಮಾರ್ ೩೨ ವರ್ಷ ಎಂಬುವರಿಂದ ದೌರ್ಜನ್ಯಕ್ಕೆ ಒಳಗಾಗಿ ಹತ್ಯೆಗೊಳಗಾದ ವೃದ್ಧೆ. ಏಪ್ರಿಲ್ ೧ ರಂದು ಬೆಳಿಗ್ಗೆ ೧೦ ಗಂಟೆ ಸಮಯದಲ್ಲಿ ಮಾಡಾಳು ಗ್ರಾಮದ ವೃದ್ಧೆ ಗೌರಮ್ಮ ಅವರು ಪಕ್ಕದ ಯರೇಹಳ್ಳಿ ಗ್ರಾಮದಲ್ಲಿರುವ ತಮ್ಮ ಜಮೀನಿನ ಹತ್ತಿರ ಹೋಗುತಿದ್ದಾಗ ದಾರಿ ತಪ್ಪಿದ್ದಾರೆ. ಈ ಸಂದರ್ಭದಲ್ಲಿ ಮಿಥುನ್ ಮತ್ತು ಅವರ ತಾಯಿ ಜಮೀನಿನ ಹತ್ತಿರ ಕೆಲಸ ಮಾಡುತ್ತಿದ್ದು, ಈ ವೇಳೆ ವೃದ್ಧೆಗೆ ದಾರಿ ತೋರುವಂತೆ ಮಿಥುನ್ ತಾಯಿ ತಿಳಿಸಿದ್ದಾರೆ. ನಂತರ ಈ ಕಾಮುಕ ವೃದ್ಧೆಯನ್ನು ಒಂದು ಮರದ ಹತ್ತಿರ ನಿಲ್ಲಿಸಿ ನಂತರ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಆಕೆ ತೀವ್ರ ವಿರೋಧ ವ್ಯಕ್ತಪಡಿಸಿದಾಗ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಅತ್ಯಾಚಾರ ಎಸಗಿದ್ದಾನೆ. ನಂತರ ಮೃತ ದೇಹವನ್ನು ಅಲ್ಲೇ ಬಿಟ್ಟು ಆತ ಪರಾರಿಯಾಗಿದ್ದನು.
ಈ ಘಟನೆಗೆ ಸಂಬಂಧಿಸಿದಂತೆ ಏಪ್ರಿಲ್ ೨ ರಂದು ನಗ್ನ ಸ್ಥಿತಿಯಲ್ಲಿದ್ದ ವೃದ್ಧೆಯ ಮೃತ ದೇಹ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಲು ಮುಂದಾಗಿದ್ದಾರೆ. ಪ್ರಾಥಮಿಕವಾಗಿ ಅಜ್ಜಿಯನ್ನು ಕಾಡಾನೆ ಇಲ್ಲವೇ ಯಾವುದೋ ಪ್ರಾಣಿಗಳು ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತಪಡಿಸಲಾಯಿತು. ನಂತರ ಆಕೆಯ ವಸ್ತ್ರಗಳು ಮರದ ಬುಡದಲ್ಲಿ ಪತ್ತೆಯಾದಾಗ ಇದು ಪ್ರಾಣಿಗಳಿಂದ ಆಗಿರುವ ಕೃತ್ಯವಲ್ಲ ಎಂದು ತಿಳಿದು ಬಂದಿತು. ಇದಾದ ಮೇಲೆ ಆಸ್ತಿಗಾಗಿ ಅಥವಾ ಚಿನ್ನಾಭರಣಕ್ಕಾಗಿ ಕೊಲೆ ನಡೆದಿರುಬಹುದು ಎಂದು ಶಂಕಿಸಲಾಯಿತು. ಈ ಆಯಾಮದಲ್ಲೂ ತನಿಖೆ ನಡೆಸಿ ಕೆಲವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ನಂತರ ಅಂತಿಮವಾಗಿ ಇದೊಂದು ಅತ್ಯಾಚಾರಕ್ಕಾಗಿ ಕೊಲೆ ನಡೆದಿರುವುದಾಗಿ ತಿಳಿದು ಬಂದಿದೆ. ಈ ಪ್ರಕರಣವನ್ನು ಭೇದಿಸಲು ಪೊಲೀಸರು ಸಾಕಷ್ಟು ಹರಸಾಹಸಗಳನ್ನು ಪಟ್ಟು ನಂತರ ಅತ್ಯಾಚಾರಕ್ಕಾಗಿ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಆರೋಪಿ ಮಿಥುನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶವನ್ನು ಒಪ್ಪಿಕೊಂಡಿದ್ದಾನೆ
ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವೃದ್ಧೆಯ ಪ್ರಕರಣವನ್ನು ತನಿಖೆ ನಡೆಸುತ್ತಿರುವಾಗ ಪೊಲೀಸರಿಗೆ ಹಲವು ಮಹತ್ವದ ಸುಳಿವುಗಳು ದೊರೆತವು. ಅವುಗಳ ಜಾಡು ಹಿಡಿದು ಹೊರಟಾಗ ಇದೊಂದು ನೀಚ ಕೃತ್ಯದಿಂದಾಗಿ ವೃದ್ಧೆಯ ಕೊಲೆಯಾಗಿದೆ ಎಂದು ಬಯಲಾಗಿದೆ. ಪೊಲೀಸರಿಗೆ ಸಿಕ್ಕಿ ಆ ಸುಳಿವುಗಳು ಯಾವುವುದೆಂದರೆ, ಮೊದಲನೆಯದಾಗಿ ಸ್ತಳೀಯರೊಬ್ಬರು ಮಿಥುನ್ ವೃದ್ಧೆಯೊಂದಿಗೆ ಹೋಗುತ್ತಿದ್ದಾಗ ನೋಡಿದ್ದು, ಅವರು ಪೊಲೀಸರಿಗೆ ತಿಳಿಸಿದ್ದಾರೆ. ಎರಡನೆಯದಾಗಿ ಮಿಥುನ್ ತಾಯಿ ದಾರಿ ತಪ್ಪಿ ಬಂದಿದ್ದ ಆ ವೃದ್ಧೆ ಗೌರಮ್ಮನನ್ನು ಬಿಟ್ಟು ಬರುವಂತೆ ಕಳುಹಿಸಿದ್ದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಸುಳಿವುಗಳ ಆಧಾರದ ಮೇಲೆ ಆರೋಪಿಯನ್ನು ಕೇವಲ ಮೂರ್ನಾಲ್ಕು ದಿನಗಳಲ್ಲಿ ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ಈ ಹಿಂದೆ ಕೂಡ ಇಂತಹ ಕೃತ್ಯ ಎಸಗಲು ಹೋಗಿ ವಿಫಲನಾಗಿದ್ದನು ಎಂಬುದು ತನಿಖೆ ವೇಳೆ ಆರೋಪಿ ಹೇಳಿಕೆ ನೀಡಿದ್ದಾನೆ. ಇಂತಹ ಪ್ರಕರಣಗಳನ್ನು ಗಮನಿಸಿದರೇ ಇದೊಂದು ಸಮಾಜವೇ ತಲೆ ತಗ್ಗಿಸುವಂತ ವಿಚಾರವಾಗಿದೆ.